ಮತದಾರರ ಪಟ್ಟಿಯಲ್ಲಿ ಬಾಲಕರ ಹೆಸರು ಸೇರ್ಪಡೆ; ಬಾಗಲಕೋಟೆಯಲ್ಲಿ ʼಮತಗಳ್ಳತನʼ ಆರೋಪ

ಸಾಂದರ್ಭಿಕ ಚಿತ್ರ | PC : PTI
ಬಾಗಲಕೋಟೆ : ದೇಶಾದ್ಯಂತ ʼಮತಗಳ್ಳತನʼ ಚರ್ಚೆ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲೂ ʼಮತಗಳ್ಳತನʼ ಆರೋಪ ಕೇಳಿಬಂದಿದೆ. 18 ವರ್ಷದೊಳಗಿನ ಮಕ್ಕಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಿದೆ ಎಂದು, ಈ ಕುರಿತು ದಾಖಲೆ ಸಮೇತ ತಾಲೂಕು ಪಂಚಾಯತ್ ಮಾಜಿ ಸದಸ್ಯರು ಆರೋಪಿಸಿದ್ದಾರೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ಪಕ್ಷದ ಮೇಲೆ ಮತಗಳ್ಳತನ ಆರೋಪ ಮಾಡಿದ್ದರು, ಆದರೆ ಈಗ ಕಾಂಗ್ರೆಸ್ ಪಕ್ಷದವರೇ ಅಪ್ರಾಪ್ತ ಬಾಲಕರ ಹೆಸರು ಸೇರ್ಪಡೆ ಮಾಡಿ ಗೆಲ್ಲುವ ತಂತ್ರ ಮಾಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲೆಯ ಮುರಡಿ ಗ್ರಾಮದ ಕೆಲ ಮುಖಂಡರು ಆರೋಪಿಸಿದ್ದಾರೆ.
ಮುಂಬರುವ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ 18 ವರ್ಷದ ಒಳಗಿನ ಮಕ್ಕಳ ಹೆಸರು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಅನಧೀಕೃತವಾಗಿ ಮತದಾರ ಪಟ್ಟಿಯಲ್ಲಿ ಎಂಟು ಮಕ್ಕಳ ಹೆಸರು ಸೇರ್ಪಡೆ ಮಾಡುವ ಮೂಲಕ ಉದ್ದೇಶ ಪೂರಕವಾಗಿ ಕಾಂಗ್ರೆಸ್ ಮುಖಂಡರಿಂದ ಇಂತಹ ಕೃತ್ಯ ನಡೆಸಲಾಗಿದೆ ಎಂದು ಆಪಾದನೆ ಮಾಡಲಾಗಿದೆ.
ಶಾಲಾ ದಾಖಲಾತಿ ಪ್ರಕಾರ 15, 16, 17 ವರ್ಷದ ಮಕ್ಕಳ ಹೆಸರು ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮರಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ಪುತ್ರ 8 ಮಕ್ಕಳಿಗೆ ಒಂದೇ ನಂಬರ್ ಮೂಲಕ ಓಟಿಪಿ ನೀಡಿ ಮತದಾನ ಗುರುತಿನ ಚೀಟಿ ಮಾಡಿದ್ದಾರೆ ಎಂದು ಗ್ರಾಮದ ಬಿಜೆಪಿ ಪಕ್ಷದ ಯುವ ಮುಖಂಡ, ತಾಲೂಕ್ ಪಂಚಾಯತ್ ಮಾಜಿ ಸದಸ್ಯ ಮಂಜನಾಥ್ ಪಾಟೀಲ್ ಆರೋಪಿಸಿದ್ದಾರೆ.







