ಬಾಗಲಕೋಟೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಶಿವಾನಂದ ಕರಡಿಗುಡ್ಡ
ಬಾಗಲಕೋಟೆ: ಕೊರೋನಾ ಆತಂಕದ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ತಗೆದುಕೊಳ್ಳಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಶಿವಾನಂದ ಕರಡಿಗುಡ್ಡ ತಿಳಿಸಿದ್ದಾರೆ.
ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಗ್ರಾಮದಲ್ಲಿ ಸಾಕಾಣಿಕೆ ಕೇಂದ್ರದಲ್ಲಿ ಇಂತಹ ರೋಗ ಪತ್ತೆಯಾಗಿದೆ. ಅನ್ಯರಾಜ್ಯದಿಂದ ಹಂದಿಗಳನ್ನು ಆಮದು ಮಾಡಿಕೊಂಡಿರುವ ವೇಳೆ ಜ್ವರ ಬಂದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೇ. 22 ಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಂದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಭೋಪಾಲದ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಹಂದಿಗಳಿಗೆ ಆಫ್ರಿಕನ್ ಜ್ವರ ಇರುವುದು ದೃಢ ಪಟ್ಟಿದೆ. ಹೀಗಾಗಿ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಮೂರು ರ್ಯಾಪಿಡ್ ಟೀಂ ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದಾರೆ. 0-1 ಕಿ.ಮೀ ವರೆಗೆ ರೋಗ ಪೀಡಿತ ವಲಯ ಹಾಗೂ 1-10ಕಿ.ಮೀ ವರೆಗೆ ಜಾಗೃತ ವಲಯ ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರೋಗ ಹರಡಿರುವ ಹಂದಿಗಳನ್ನು ಜೀವಂತ ಸಮಾಧಿ ಮಾಡಲಾಗುತ್ತಿದೆ.ಇಳಕಲ್ ತಾಲೂಕಿನಲ್ಲಿ ಹಂದಿ ಸಾಕಣಿಕೆ ಮಾಡಿ ಕೇರಳ, ತಮಿಳುನಾಡು ಹಾಗೂ ರಾಜ್ಯದ ಕೊಡಗು ಜಿಲ್ಲೆಗೆ ಕಳುಹಿಸಲಾಗುತ್ತದೆ. ಬಾಗಲಕೋಟೆ ಜಿಲ್ಲೆಗೆ ಮಾತ್ರ ಈ ರೋಗ ಸಿಮೀತವಾಗಿಲ್ಲ. ಈಗಾಗಲೇ ಕೇಂದ್ರ ಸರ್ಕಾರ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಹಂದಿ ರೋಗ ಹರಡಿರುವ ಬಗ್ಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.