ಬಾಗಲಕೋಟೆ | ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಸವರ್ಣೀಯರಿಂದ ಹಲ್ಲೆ : 21 ಮಂದಿ ಬಂಧನ

ಸಾಂದರ್ಭಿಕ ಚಿತ್ರ
ಬಾಗಲಕೋಟೆ : ದೇವಸ್ಥಾನ ಪ್ರವೇಶಿದ್ದಕ್ಕೆ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಒಟ್ಟು 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ದ್ಯಾಮವ್ವ ದೇವಿಯ ಗುಡಿ ಪ್ರವೇಶ ಮಾಡಿದ್ದಕ್ಕೆ, ಸವರ್ಣೀಯರು ದಲಿತ ಯುವಕನಿಗೆ ಜಾತಿ ನಿಂದನೆ ಮಾಡಿ, ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ.
ಥಳಿತಕ್ಕೊಳಗಾಗಿರುವ ಯುವಕ ಅರ್ಜುನ್ ಮಾದರ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.
"ಊರಲ್ಲಿನ ದ್ಯಾಮವ್ವನ ಗುಡಿ ಒಳಗೆ ಹೋದಾಗ, ಗುಡಿಯೊಳಗೆ ಏಕೆ ಹೋಗ್ತಿಯಾ ಎಂದು ಎಳೆದಾಡಿ, ಹಲ್ಲೆ ಮಾಡಿದರು. ನಂತರ ಕಂಬಕ್ಕೆ ಕಟ್ಟಿ ಥಳಿಸಿದರು. ಮಧ್ಯರಾತ್ರಿ ಎರಡು ಗಂಟಗೆ ಪೊಲೀಸರು ಬಂದು ಠಾಣೆಗೆ ಕರೆದೊಯ್ದರು. ಇದಾದ ನಂತರ, ಊರಲ್ಲಿ ದಲಿತರು ಯಾರೂ ಬರಬಾರದು ಎಂದು ಡಂಗುರ ಸಾರಿದರು. ಈ ಹಿಂದೆಯೂ ಗ್ರಾಮದಲ್ಲಿನ ಅಂಬೇಡ್ಕರ್ ಸರ್ಕಲ್ ನಿರ್ಮಿಸಬಾರದೆಂದು ಆಗಾಗ್ಗೆ ಜಗಳ ಆಗುತ್ತಿತ್ತು. 15ಕ್ಕೂ ಅಧಿಕ ಜನರಿಂದ ನನ್ನ ಮೇಲೆ ಹಲ್ಲೆಯಾಗಿದ್ದು, ನಾನು ಯಾರ ಮೇಲಿಯೂ ಹಲ್ಲೆ ಮಾಡಿಲ್ಲ. ಇದು ವೈಯಕ್ತಿಕ ದ್ವೇಷ ಅಲ್ಲ, ಈ ಬಗ್ಗೆ ದೂರು ಕೂಡಾ ನೀಡಿಲ್ಲ" ಎಂದು ಅರ್ಜುನ ತಿಳಿಸಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾತಿ ನಿಂದನೆ ಕೇಸ್ ದಾಖಲಾಗಿದ್ದು, ಮುದಿಗೌಡ ಸತ್ಯನ್ನವರ, ಮಂಜುನಾಥ ಮೂಲಿಮನಿ ಸೇರಿದಂತೆ ಒಟ್ಟು 21 ಜನರ ಮೇಲೆ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಡಳಿತ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ, ಎರಡು ಸಮುದಾಯದವರನ್ನು ಸೇರಿಸಿ, ಮಾತುಕತೆ ಮಾಡಿ ಸೌಹಾರ್ದತೆಯಿಂದ ಇರುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಎಸ್.ಪಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.







