ಬಾಗಲಕೋಟೆ | ಫೆಲೆಸ್ತೀನ್ ಅಧ್ಯಕ್ಷರ ಜೊತೆ ಪ್ರಧಾನಿಯ ಫೊಟೋ ಹಂಚಿಕೊಂಡ ಎಸ್ಡಿಪಿಐ ಕಾರ್ಯಕರ್ತನ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ
ಹಲ್ಲೆಗೊಳಗಾದ ಸೈಯದ್ ಭಾಷಾ
ಬಾಗಲಕೋಟೆ : ಫೆಲೆಸ್ತೀನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸುತ್ತಿರುವ ಫೋಟೊವನ್ನು ವಾಟ್ಸಾಪ್ ಸ್ಟೇಟಸ್ ಹಾಕಿದ ಹಿನ್ನೆಲೆ, ಬಾದಾಮಿ ಪೊಲೀಸ್ ಠಾಣೆಯಲ್ಲಿ ಎಸ್ಡಿಪಿಐ ಕಾರ್ಯಕರ್ತನ ವಿರುದ್ಧ ಫೆಲೆಸ್ತೀನ್ ಪರವಾಗಿ ಸ್ಟೇಟಸ್ ಹಾಕಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ಹೆಸರಲ್ಲಿ ಎಸ್ಡಿಪಿಐ ಕಾರ್ಯಕರ್ತನನ್ನು ಠಾಣೆಗೆ ಕರೆಸಿ ಬಾದಾಮಿ ಪಿಎಸ್ಐ ವಿಠ್ಠಲನಾಯಕ ಹಾಗೂ ಇತರೆ ಸಿಬ್ಬಂದಿಗಳು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೈಯದ್ ಭಾಷಾ ಎಂಬ ಎಸ್ಡಿಪಿಐ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಎಸ್ಡಿಪಿಐ ನಾಯಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಒತ್ತಾಯಿಸಲಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, “ಪೊಲೀಸರು ಯಾವುದೇ ಹಲ್ಲೆ ಮಾಡಿಲ್ಲ. ಎಂಟು ದಿನಗಳ ಹಿಂದೆ ಜೈಲಿನಲ್ಲಿ ಇದ್ದು, ಬಿಡುಗಡೆ ಆಗಿದ್ದಾರೆ. ಬಳಿಕ ಸುಳ್ಳು ಸೃಷ್ಟಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹರಿಬಿಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.