ಬಾಗಲಕೋಟೆ | ನಕಲಿ ತಾಯಿ ಕಾರ್ಡ್ ಪಡೆದಾಕೆಯಿಂದ ಆಸ್ಪತ್ರೆಯಲ್ಲಿ ಮಗು ಕಳ್ಳತನ; ವೈದ್ಯರ ರೌಂಡ್ಸ್ ವೇಳೆ ಪ್ರಕರಣ ಬಯಲು

ಬಾಗಲಕೋಟೆ : ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮಗು ಕಳ್ಳತನ ಪ್ರಕರಣ, ಮಧ್ಯಾಹ್ನದ ವೇಳೆಗೆ ಸುಖಾಂತ್ಯಗೊಂಡಿದೆ. ಪಕ್ಕದ ರೂಮ್‌ನಲ್ಲಿರುವ ಮಹಿಳೆಯೇ ಮಗು ಕಳ್ಳತನ ಮಾಡಿಕೊಂಡು ಹೋಗಿದ್ದು, ಸ್ಥಳೀಯ ವೈದ್ಯರು ಮಗುವನ್ನು ಪತ್ತೆ ಮಾಡಿದ್ದಾರೆ.
ಮೆಹಬೂಬಿ ನದಾಪ (30) ಎಂಬ ಮಹಿಳೆಯು ಕಳೆದ ದಿನ ರಾತ್ರಿ ಹೆರಿಗೆಗೆ ಆಸ್ಪತ್ರೆಗೆ ಆಗಮಿಸಿದ್ದರು. ಬೆಳಗಿನ ಜಾವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದರು. ಆರೋಪಿ ಸಾಕ್ಷಿ ಎಂಬ ಮಹಿಳೆಯು ನರ್ಸ್ ಎಂದು ಹೇಳಿ ನಸುಗಿನ ಜಾವ ನಾಲ್ಕು ಗಂಟೆಗೆ ತಾಯಿಯ ಪಕ್ಕದಲ್ಲೇ ಮಲಗಿದ್ದ ಮಗುವಿಗೆ ಕಫ ಆಗಿದೆ ಎಂದು ತೆಗೆದುಕೊಂಡು ಹೋಗಿದ್ದಳು. ಆಮೇಲೆ ವಿಚಾರಣೆ ಮಾಡಿದಾಗ ಮಗು ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿತ್ತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಸಿಟಿವಿ ಪರಿಶೀಲನೆ ಬಳಿಕ ಮಗುವನ್ನು ಯಾರು ಎತ್ತಿಕೊಂಡು ಹೋಗಿದ್ದಾರೆ ಮಾಹಿತಿ ಸಿಗಲಿದೆ, ಶೀಘ್ರವಾಗಿ ಪತ್ತೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು.
ಮಧ್ಯಾಹ್ನದ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ರಜನಿ ಎಂಬುವವರು ವಾರ್ಡ್ಸ್ನಲ್ಲಿ ರೌಂಡ್ಸ್ಗೆ ಹೋದ ಬಳಿಕ ಸಾಕ್ಷಿ ಶ್ರೀಶಾಂತ ಯಾದವಾಡ ಎಂಬ ಮಹಿಳೆ ಹೆರಿಗೆ ಆಗಿಲ್ಲದಿದ್ದರೂ ಮಗುವಿಗೆ ಹಾಲುಣಿಸುತ್ತಿದ್ದರು. ಈ ಬಗ್ಗೆ ಡಾ.ರಜನಿ ವಿಚಾರಣೆ ಮಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಅಲ್ಲದೆ, ಡಾ.ರಜನಿ ಅವರು ಕೂಡ ತಾಯಿ ಮೆಹಬೂಬಿ ನದಾಪ ಅವರಿಗೆ ತೋರಿಸಿದಾಗ ಮಗುವನ್ನು ಗುರುತು ಹಿಡಿದಿದ್ದಾರೆ. ಆ ಬಳಿಕ ಕಳ್ಳತನ ಆಗಿದ್ದ ಮಗು ಪತ್ತೆ ಆದ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳಾ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾಕ್ಷಿ ಎಂಬ ಮಹಿಳೆಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ನವನಗರ ಪೊಲೀಸ್ ಠಾಣೆಯಲ್ಲಿ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಾಪೇಟ್ ಗ್ರಾಮದ ನಿವಾಸಿಯಾಗಿರುವ ಆರೋಪಿ ಸಾಕ್ಷಿ ಎಂಬ ಮಹಿಳೆಯು ಗರ್ಭಿಣಿ ಎಂದು ಕಡಕೋಳ ಪ್ರಾಥಮಿಕ ಕೇಂದ್ರದಲ್ಲಿ ತಾಯಿ ಕಾರ್ಡ್ ಸಹ ಪಡೆದಿದ್ದಳು. ತಾಯಿ ಕಾರ್ಡ್ ಸೇರಿದಂತೆ ಇತರೆ ನಕಲಿ ದಾಖಲೆಗಳನ್ನು ಇಟ್ಟುಕೊಂಡು, ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ತಿಳಿದು ಬಂದಿದೆ.