Bagalkot | ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ : ರವಿ ಹಂಜಿ ಬಂಧನಕ್ಕೆ ವೀರಣ್ಣ ಚರಂತಿಮಠ ಆಗ್ರಹ

ಬಾಗಲಕೋಟೆ: ಸರ್ವಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಬಸವಣ್ಣನವರ ಕುರಿತು ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಆರೋಪ ಎದುರಿಸುತ್ತಿರುವ ರವಿ ಹಂಜಿ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಆಗ್ರಹಿಸಿದರು.
ನಗರದ ಬಿ.ವಿ.ವಿ. ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವಯಂಘೋಷಿತ ಲೇಖಕ ರವಿ ಹಂಜಿ ಅವರು ವಿಶ್ವಗುರು ಬಸವಣ್ಣನವರ ಕುರಿತು ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಮತ್ತು ಬರಹಗಳನ್ನು ಪ್ರಕಟಿಸಿರುವುದು ಖಂಡನೀಯ. ವಿದೇಶದಲ್ಲಿ ನೆಲೆಸಿರುವ ಅವರು ಕನ್ನಡಿಗರ ಸದ್ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದರ ಜೊತೆಗೆ, ತಮ್ಮ ‘ಬಸವ ಮಂಟಪ’ ಕೃತಿಯಲ್ಲಿಯೂ ಆಕ್ಷೇಪಾರ್ಹ ವಿಚಾರಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ರವಿ ಹಂಜಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಾಕ್ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕೆ ಯಾರ ಬಗ್ಗೆಯೂ ಕೀಳಾಗಿ ಮಾತನಾಡುವ ಅಥವಾ ಬರೆಯುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಿ, ವಿವಾದಗಳಿಗೆ ಅಂತ್ಯ ಹಾಡಬೇಕು ಎಂದು ವೀರಣ್ಣ ಚರಂತಿಮಠ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಬಾಗಲಕೋಟೆ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ ಮಾತನಾಡಿ, ಕನ್ನಡದ ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಬಸವಣ್ಣನವರ ಘನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಟಿ.ವಿ. ವಾಹಿನಿಯ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಹಾಗೂ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ. ಅಲ್ಲದೆ, ‘ಬಸವ ಮಂಟಪ’ ಕೃತಿಯಲ್ಲಿಯೂ ಇದೇ ರೀತಿಯ ಆಕ್ಷೇಪಾರ್ಹ ಬರಹಗಳನ್ನು ಪ್ರಕಟಿಸಿರುವುದನ್ನು ಮಹಾಸಭೆಯ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.
ಬಸವಣ್ಣನವರ ತತ್ವ, ಆದರ್ಶ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಅಪಮಾನವಾಗುವಂತಹ ವಿಚಾರಗಳನ್ನು ಸಹಿಸಲು ಸಾಧ್ಯವಿಲ್ಲ. ಲೇಖಕರ ವಾಕ್ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಆದರೆ, ಆ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ಅಥವಾ ಬರಹಗಳನ್ನು ಒಪ್ಪಲು ಸಾಧ್ಯವಿಲ್ಲ. ಈ ವಿವಾದಕ್ಕೆ ಕಾರಣವಾಗಿರುವ ರವಿ ಹಂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ, ಅದರ ನಿಷೇಧಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಸರ್ಕಾರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಬಾಗಲಕೋಟೆ ಜಿಲ್ಲಾ ಘಟಕ ಆಗ್ರಹಿಸುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ, ಬಸವರಾಜ ಮುಕುಪಿ, ಬಸವರಾಜ ಇಂಡಿ, ವಿಜಯಕುಮಾರ ಅಂಗಡಿ, ಚಂದ್ರಶೇಖರ ಶೆಟ್ಟರ, ಬಸವರಾಜ ತಡಲಗಿ, ಆರ್.ಎಚ್. ಕಾಯಿ, ಮಹಾಂತೇಶ ಶೆಟ್ಟರ, ಮಲ್ಲಿಕಾರ್ಜುನ ಸಾಸನೂರ, ಗುರುಬಸವ ಸೂಳಿಬಾವಿ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






