ಬಾಗಲಕೋಟೆ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ: ಆರ್.ಅಶೋಕ್ ಆರೋಪ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಕಾಲೇಜು ಕ್ಯಾಂಪಸ್ಸಿಗೆ ಹೋಗಿ ನೀವು ಬಿಜೆಪಿಗೆ ಮತ ಕೊಟ್ಟರೆ ಜೈಲಿಗೆ ಹಾಕುತ್ತೇವೆ ಎಂಬ ಮಾಹಿತಿಯುಳ್ಳ ಒಂದು ಕರಪತ್ರವನ್ನು ಹಂಚಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ಸಂಸದ ಗೋವಿಂದ ಕಾರಜೋಳ ಪೊಲೀಸರಿಗೆ ದೂರು ನೀಡಿದ ಬಳಿಕ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಪೊಲೀಸ್ ಠಾಣೆಯಲ್ಲೆ ಆರೋಪಿಗಳು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇನ್‍ಸ್ಪೆಕ್ಟರ್ ಬಾಯಿ ಮುಚ್ಚಿಕೊಂಡು ಆರಾಮವಾಗಿ ಕುಳಿತಿದ್ದರು. ಬಂಧಿತರು ಲಾಕಪ್ ಒಳಗಡೆ ಇರಬೇಕಿತ್ತು. ಆದರೆ, ರಾಜಾರೋಷವಾಗಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಕರ್ನಾಟಕದಲ್ಲಿ ಗೂಂಡಾ ರಾಜ್ಯ ಇದೆಯೇ ಎಂದು ಅಶೋಕ್ ಪ್ರಶ್ನಿಸಿದರು.
ಕಾಂಗ್ರೆಸ್ಸಿಗರು ಡಿ.ಕೆ.ಶಿವಕುಮಾರ್ ಹೇಳಿದ ಮಾದರಿಯಲ್ಲಿ ಬಂದು ಗೂಂಡಾಗಿರಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಈ ಘಟನೆಗೆ ನೇರ ಕಾರಣ. ನಾಳೆ ಹಳ್ಳಿಗಳಲ್ಲೂ ಇದೇ ವರ್ತನೆ ಮರುಕಳಿಸಬಹುದು ಎಂದು ಅವರು ಹೇಳಿದರು.
ನೂರಾರು ಕೋಟಿ ಹಣ ಹಂಚಲು ಸಿದ್ಧತೆ: ಉಪ ಚುನಾವಣೆಯಲ್ಲಿ ಗೆಲ್ಲಲು ನೂರಾರು ಕೋಟಿ ಹಣ ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಅಭಿವೃದ್ಧಿ-ಜನಪರ ಕೆಲಸ ಮಾಡಿಲ್ಲ. ಆದುದರಿಂದ, ಹಣ ಹಂಚಿ ಗೆಲ್ಲಲು ಹೊರಟಿದ್ದಾರೆ. ಹೀಗಾದರೆ ನ್ಯಾಯಯುತ ಚುನಾವಣೆ ಆಗುವುದು ಹೇಗೆ? ಎಂದು ಅಶೋಕ್ ಪ್ರಶ್ನಿಸಿದರು.






