Bagalkot | ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ವೈದ್ಯರಿಗೆ 1.06 ಕೋಟಿ ರೂ. ವಂಚನೆ : ಪ್ರಕರಣ ದಾಖಲು

ಬಾಗಲಕೋಟೆ: ಸೈಬರ್ ವಂಚಕರು ಆ್ಯಪ್‌ನಲ್ಲಿ ತೋರಿಸಿದ್ದ 8,49,79,318 ರೂ. ಲಾಭದ ಹಣ ಪಡೆಯುವ ಆಸೆಗೆ ಬಿದ್ದ ವೈದ್ಯರೊಬ್ಬರು ಬರೋಬ್ಬರಿ 1,06,69,262 ರೂ. ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ: ಇಳಕಲ್ಲ ನಗರದ ಪ್ರತಿಷ್ಠಿತ ವೈದ್ಯರೊಬ್ಬರ ಮೊಬೈಲ್ ಸಂಖ್ಯೆಯನ್ನು 2026ರ ಜೂನ್ 29ರಂದು ಅಪರಿಚಿತರು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದರು. ಬಳಿಕ ನಕಲಿ ಷೇರು ಮಾರುಕಟ್ಟೆ ಹಾಗೂ ಐಪಿಒ ಹೂಡಿಕೆಯ ಆಮಿಷವೊಡ್ಡಿದ್ದರು ಎನ್ನಲಾಗಿದೆ.
ವಂಚಕರ ಸೂಚನೆಯಂತೆ ವೈದ್ಯರು ‘NAM AMC HNW’ ಎಂಬ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಹಲವು ದಿನಗಳ ಕಾಲ ಅವರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 96,69,262 ರೂ. ಹಣ ವರ್ಗಾಯಿಸಿದ್ದರು. ಈ ಹೂಡಿಕೆಗೆ ಪ್ರತಿಯಾಗಿ ಆ್ಯಪ್‌ನಲ್ಲಿ 8,49,79,318 ರೂ. ಲಾಭಾಂಶ ಇರುವುದಾಗಿ ತೋರಿಸಲಾಗಿತ್ತು. ತಮ್ಮ ಲಾಭದ ಹಣವನ್ನು ಹಿಂಪಡೆಯಲು ವೈದ್ಯರು ಮುಂದಾದಾಗ, ಭದ್ರತಾ ಠೇವಣಿಯ ಹೆಸರಿನಲ್ಲಿ ವಂಚಕರು ಹೆಚ್ಚುವರಿಯಾಗಿ 10 ಲಕ್ಷ ರೂ. ಹೂಡಿಕೆ ಮಾಡುವಂತೆ ಒತ್ತಾಯಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ. ಇದಾದ ಬಳಿಕ ಲಾಭದ ಹಣವಾಗಲಿ, ತಾವು ಹೂಡಿಕೆ ಮಾಡಿದ್ದ ಹಣವಾಗಲಿ ವಾಪಸ್ ಬಾರದಿದ್ದರಿಂದ ಕಂಗಾಲಾದ ವೈದ್ಯರು 1930 ಸೈಬರ್ ಸಹಾಯವಾಣಿ ಮೂಲಕ ದೂರು ದಾಖಲಿಸಿದ್ದಾರೆ. ಈ ಸಂಬಂಧ ನವನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




