ಬಾಗಲಕೋಟೆ: ಗಂಡ ನಾಪತ್ತೆ; ಮಾನಸಿಕ ಸ್ಥಿಮಿತ ಕಳೆದುಕೊಂಡ ಪತ್ನಿ ಗೃಹಬಂಧನದಲ್ಲಿ

ಶಂಕ್ರವ್ವ | ಪಿಡ್ಡಪ್ಪ
ಬಾಗಲಕೋಟೆ: ಮದುವೆಯಾದ ಎರಡೇ ತಿಂಗಳಿಗೆ ಗಂಡ ನಾಪತ್ತೆಯಾಗಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡ ಪತ್ನಿಯನ್ನು ಗೃಹಬಂಧನದಲ್ಲಿಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮದಿಂದ ವರದಿಯಾಗಿದೆ.
ಶಂಕ್ರವ್ವ ಸೇಬಿನಕಟ್ಟಿ ಎಂಬಾಕೆ ಗೃಹಬಂಧನದಲ್ಲಿರುವ ಮಹಿಳೆ. ಏಳು ವರ್ಷಗಳ ಹಿಂದೆ 2018 ಫೆಬ್ರವರಿಯಲ್ಲಿ ಪಿಡ್ಡಪ್ಪ ಎಂಬ ವ್ಯಕ್ತಿಯೊಂದಿಗೆ ಈಕೆಯ ವಿವಾಹ ನಡೆದಿತ್ತು. ಮದುವೆ ನಂತರ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಪಿಡ್ಡಪ್ಪ ನಾಪತ್ತೆಯಾಗಿದ್ದಾರೆ. ಪಿಡ್ಡಪ್ಪ ಬದುಕಿದ್ದಾರೋ ಮೃತಪಟ್ಟಿದ್ದಾರೋ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿದು ಬಂದಿದೆ.
ಗಂಡ ನಾಪತ್ತೆಯಾದ ಬೆನ್ನಲ್ಲೇ ಮಾನಸಿಕ ಸ್ಥಿಮಿತ ಕಳೆದುಕೊಂಡ ಶಂಕ್ರವ್ವಳನ್ನು ತವರು ಮನೆಯವರು ಕೈ ಕಾಲುಗಳನ್ನು ಕಟ್ಟಿಹಾಕಿ ದನದ ಕೊಟ್ಟಿಗೆಯಲ್ಲಿ ಬಂಧನದಲ್ಲಿರಿಸಿದ್ದಾರೆ. ಕೂಲಿ ಕೆಲಸಕ್ಕೆ ಹೋಗುವ ತಂದೆ ತಾಯಿ, ಕೊಟ್ಟಿಗೆಯಲ್ಲೇ ಆಕೆಗೆ ಊಟೋಪಹಾರ ನೀಡುತ್ತಾರೆ. ಬಂಧನದಿಂದ ಬಿಡಿಸಿದರೆ ತಾಯಿ ಮೇಲೆ ಹಲ್ಲೆ ಮಾಡುವ ಶಂಕ್ರವ್ವ, ಬಾವಿಗೆ ಹಾರಿ ಆತ್ಮಹತ್ಯೆಗೂ ಯತ್ನಿಸುತ್ತಾಳೆ. ಇದರಿಂದ ಪೋಷಕರು ಆಕೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿ ಕೂಲಿಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
ಸಕಾಲಕ್ಕೆ ಸರಿಯಾದ ಚಿಕಿತ್ಸೆಯಿಲ್ಲದೇ ಮಾನಸಿಕ ರೋಗದಿಂದ ಬಳಲುತ್ತಿರುವ ಯುವತಿಯ ಚಿಕಿತ್ಸೆಗೆ ಆರ್ಥಿಕ ಕೊರತೆಯೂ ಮನೆಮಂದಿಯನ್ನು ಕಾಡುತ್ತಿದೆ. ಇದೀಗ ಯುವತಿಯ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.