Bagalakote | ಲಾರಿ ಚಾಲನೆ ವೇಳೆ ಹೃದಯಾಘಾತದಿಂದ ಚಾಲಕ ಮೃತ್ಯು

ಬಾಗಲಕೋಟೆ: ಲಾರಿ ಚಾಲನೆ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟ ಘಟನೆ ಇಲಕಲ್ಲ ನಗರದ ಸಮೀಪ ದ ಸೋಲಾಪೂರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 50 ಕೆಎಚ್ಡಿಸಿ ಕಾಲನಿಯ ಸಮೀಪ ಶನಿವಾರ ನಡೆದಿದೆ.
ಮೃತರನ್ನು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ಪಟ್ಟಣದ ಅನ್ಸಾರ್ ಅಹ್ಮದ್ (60) ಎಂದು ಗುರುತಿಸಲಾಗಿದೆ.
ಕುಷ್ಟಗಿ ಮಾರ್ಗದತ್ತ ಹೊರಟಿದ್ದ ಲಾರಿಯ ಚಾಲನೆ ವೇಳೆ ಅನ್ಸಾರ್ ಅಹ್ಮದ್ ರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಾಗರೂಕರಾದ ಚಾಲಕ, ಲಾರಿಯನ್ನು ಹೆದ್ದಾರಿಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಆದರೆ, ಅಷ್ಟರಲ್ಲೇ ಸ್ಟೇರಿಂಗ್ ಮೇಲೆಯೇ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಚಾಲಕ: ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡರೂ, ಚಾಲಕ ಸಮಯಪ್ರಜ್ಞೆ ಮೆರೆದು ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಒಂದು ವೇಳೆ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸದೇ ಹಾಗೆಯೇ ಹೋಗಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಚಾಲಕನ ಕೊನೆ ಕ್ಷಣದ ಜಾಗರೂಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






