ಬಾಗಲಕೋಟೆ : ಅಪ್ರಾಪ್ತನಿಂದ ಯುವಕನ ಕೊಲೆ; ಆರೋಪಿ ಪೊಲೀಸ್ ವಶಕ್ಕೆ

ರಾಹುಲ್ ಸಪ್ತಸಾಗರ
ಬಾಗಲಕೋಟೆ: ಜಿಲ್ಲೆಯ ರಬಕವಿ–ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದ ಗಲಾಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಯುವಕನನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ರಾಹುಲ್ ಸಪ್ತಸಾಗರ (19) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಯುವತಿಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಉಂಟಾಗಿತ್ತು ಎನ್ನಲಾಗಿದೆ.
ಘಟನೆಯ ಮುನ್ನಾ ದಿನ ಅಪ್ರಾಪ್ತ ಬಾಲಕ ತನ್ನ ಸ್ನೇಹಿತರೊಂದಿಗೆ ಬಂದು ಗಲಾಟೆ ಮಾಡಿದ್ದಾನೆ. ಬಳಿಕ ಬೈಕ್ ನ ಕೀ ಚೈನ್ನಲ್ಲಿ ಇದ್ದ ಹರಿತವಾದ ಆಯುಧದಿಂದ ರಾಹುಲ್ನ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ಗೆ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





