ಬಾಗಲಕೋಟೆ: ಆರು ಪಟ್ಟಣ ಪಂಚಾಯತಿಗಳ ಮೇಲೆ ಲೋಕಾಯುಕ್ತ ದಾಳಿ
ಇ-ಸ್ವತ್ತು, ಎನ್ಓಸಿ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ಅಕ್ರಮಗಳ ಆರೋಪ

ಬಾಗಲಕೋಟೆ: ಸಾರ್ವಜನಿಕರಿಂದ ಬಂದ ದೂರುಗಳು, ಅರ್ಜಿದಾರರು ಸಲ್ಲಿಸಿದ ಮನವಿಗಳು ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳಲ್ಲಿ ಗುರುವಾರ ಶೋಧ ಹಾಗೂ ಪರಿಶೀಲನಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಲೋಕಾಯುಕ್ತರ ನಿರ್ದೇಶನದಂತೆ ಶಿರೂರ, ಲೋಕಾಪುರ, ಕೆರೂರ, ಕಮತಗಿ, ಬೀಳಗಿ ಹಾಗೂ ಬೆಳಗಲಿ ಪಟ್ಟಣ ಪಂಚಾಯಿತಿಗಳ ಕಚೇರಿಗಳಿಗೆ ಭೇಟಿ ನೀಡಿ ವಿವಿಧ ದಾಖಲೆಗಳು ಮತ್ತು ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸಲಾಗುತ್ತಿದೆ.
ಇ-ಸ್ವತ್ತು, ಎನ್ಓಸಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದು ಸೇರಿದಂತೆ ಹಲವು ಅಕ್ರಮಗಳ ಕುರಿತು ದೂರುಗಳು ಬಂದಿದ್ದವು. ನಿಯಮ ಉಲ್ಲಂಘಿಸಿ ನಿವೇಶನಗಳನ್ನು ಸೃಷ್ಟಿಸಿ ವಾಣಿಜ್ಯ ಉದ್ದೇಶಕ್ಕಾಗಿ ಡಿಜಿಟಲ್ ಉತಾರ ಹಾಗೂ ನಕಲಿ ಹಕ್ಕುಪತ್ರಗಳನ್ನು ನೀಡಿರುವುದು, ಲೇಔಟ್ ಅಭಿವೃದ್ಧಿಪಡಿಸದಿದ್ದರೂ ನಿಯಮಬಾಹಿರವಾಗಿ ದಾಖಲೆ ಮಾಡಿರುವ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಅಲ್ಲದೆ, ಪಟ್ಟಣಗಳಲ್ಲಿನ ಶುದ್ಧ ಕುಡಿಯುವ ನೀರಿನ ನಿರ್ವಹಣೆ, ತೆರಿಗೆ ಸಂಗ್ರಹಣೆ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯಲೋಪದ ಆರೋಪಗಳನ್ನೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳ ಲೋಕಾಯುಕ್ತ ಘಟಕಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಒಟ್ಟು ಇಬ್ಬರು ಡಿವೈಎಸ್ಪಿ, 9 ಜನ ಪೊಲೀಸ್ ನಿರೀಕ್ಷಕರು ಹಾಗೂ 30 ಸಿಬ್ಬಂದಿ ಸೇರಿದಂತೆ ಒಟ್ಟು 41 ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.






