ಬಾಗಲಕೋಟೆ: ಪ್ರೇಯಸಿಯ ಆತ್ಮಹತ್ಯೆ ಸುದ್ದಿ ತಿಳಿದು ಪ್ರಿಯಕರನೂ ಆತ್ಮಹತ್ಯೆ

ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಮದುವೆ ವಿಚಾರವಾಗಿ ಮನೆಯವರ ವಿರೋಧ ಎದುರಿಸಿದ ಹಿನ್ನೆಲೆಯಲ್ಲಿ, ಇಬ್ಬರು ಪ್ರೇಮಿಗಳು ಚರ್ಚೆ ನಡೆಸುವ ವೇಳೆ ಗಲಾಟೆ ಉಂಟಾಗಿ ವೈಮನಸ್ಸು ಉಂಟಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತರನ್ನು ಪವಿತ್ರಾ ರಾಜಶೇಖರ ಒಂಟಿ (19) ಎಂದು ಗುರುತಿಸಲಾಗಿದೆ. ಈ ಘಟನೆ ಬಗ್ಗೆ ತಿಳಿದು ಭಯಗೊಂಡ ಪ್ರಿಯಕರ ಕಾರ್ತಿಕ್ ಚನ್ನಪ್ಪ ನಾಯಕ (21) ಕೂಡ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊದಲೇ ಇಬ್ಬರ ನಡುವೆ ಗಲಾಟೆ ನಡೆದಿದ್ದ ಹಿನ್ನೆಲೆ ಇಬ್ಬರೂ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಯುವತಿಯ ಪಾಲಕರು ನೀಡುವ ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.





