Bagalkote | ಬನಹಟ್ಟಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಒತ್ತಾಯ: ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ, ಧರಣಿ

ಬಾಗಲಕೋಟೆ: ಬನಹಟ್ಟಿ ಪಟ್ಟಣದಲ್ಲೇ ಪ್ರಜಾಸೌಧ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಪ್ರಜಾಸೌಧ ಹೋರಾಟ ಸಮಿತಿಯ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಸೋಮವಾರ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಬನಹಟ್ಟಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಒತ್ತಾಯಿಸಿ ಮೂರು ದಿನಗಳ ಹಿಂದೆ ಬನಹಟ್ಟಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆ ಹಮ್ಮಕೊಳ್ಳಲಾಗಿತ್ತು. ಸೋಮವಾರ ಬಾಗಲಕೋಟೆ ನಗರಕ್ಕೆ ಪಾದಯಾತ್ರೆ ತಲುಪಿದ್ದು, ನೂರಾರು ಮಂದಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ, ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಪ್ರಜಾಸೌಧ ಹೋರಾಟ ಸಮಿತಿಯ ಅಧ್ಯಕ್ಷ ಶಂಕರ್ ಸೋರಗಾಂವಿ, ಜಿಲ್ಲೆಯ ಬನಹಟ್ಟಿಯಲ್ಲೇ ಪ್ರಜಾ ಸೌಧ ನಿರ್ಮಾಣ ಮಾಡುವುದಕ್ಕೆ ಎಲ್ಲಾ ಅನುಕೂಲಕರ ವಾತಾವರಣವಿದ್ದು, ಸರಕಾರ ಅಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡದೇ ಹೋದಲ್ಲಿ ಮುಂದಿನ ದಿನಮಾನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಸರಕಾರವು ರಬಕವಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಿಸಲು ಮುಂದಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಧರಣಿನಿರತರು, ಬನಹಟ್ಟಿ ತಾಲೂಕು ಕೇಂದ್ರವಾಗಿದ್ದು, ಬನಹಟ್ಟಿ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಂಗಪ್ಪ, ಧರಣಿನಿರತರ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.






