Bagalkote | ಪಕ್ಷ ವಿರೋಧಿ ಚಟುವಟಿಕೆ ಆರೋಪ : ಕಾಂಗ್ರೆಸ್‌ನ ಮೂವರು ಮುಖಂಡರು ಅಮಾನತು

ಬಾಗಲಕೋಟೆ : ವಿಧಾನಸಭೆ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕಮತಗಿಯ ಮೂವರು ಕಾಂಗ್ರೆಸ್ ಮುಖಂಡರ ವಿರುದ್ಧ ಪಕ್ಷ ಅಮಾನತು ಕ್ರಮ ಕೈಗೊಂಡಿದೆ. ಉಚ್ಚಾಟನೆ ಭೀತಿ ಎದುರಿಸುತ್ತಿದ್ದ ಅವರು ಕೊನೆಗೂ ಅಮಾನತುಗೊಂಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಕಮತಗಿ ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ಜಮಖಂಡಿ, ಗುರು ಪಾಟೀಲ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ದೂರುದಾರರಿಂದ ಕ್ರಮಕ್ಕೆ ಒತ್ತಾಯ :
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಂ.ರಾಂಪೂರ ಹಾಗೂ ಕಮತಗಿ ಪಪಂ ಸದಸ್ಯರು, ಉಪಚುನಾವಣೆಯಲ್ಲಿ ಈ ಮೂವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧ್ಯಕ್ಷರಿಗೆ ದೂರು ಸಲ್ಲಿಸಿದ್ದರು.
ನೋಟಿಸ್ ಬಳಿಕ ಅಮಾನತು :
ದೂರು ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರು ಮೂವರಿಗೆ ಮೂರು ದಿನಗಳ ಗಡುವಿನೊಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಮೂವರೂ ಲಿಖಿತ ಉತ್ತರ ಸಲ್ಲಿಸಿದ್ದರೂ, ಉತ್ತರಗಳು ಆಧಾರ ರಹಿತವಾಗಿವೆ ಎಂಬ ಕಾರಣ ನೀಡಿ ರವಿವಾರ ಸಂಜೆ ಅಮಾನತು ಆದೇಶ ಹೊರಡಿಸಲಾಗಿದೆ.
ಉಚ್ಚಾಟನೆ ನಿರೀಕ್ಷೆ ವಿಫಲ :
ಈ ಮೂವರ ವಿರುದ್ಧ ಉಚ್ಚಾಟನೆ ಕ್ರಮ ಜರುಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದ್ದು, ಉಚ್ಚಾಟನೆ ಬದಲು ಅಮಾನತು ಕ್ರಮ ಮಾತ್ರ ಕೈಗೊಳ್ಳಲಾಗಿದೆ. ಅಮಾನತುಗೊಂಡ ಮೂವರು ಕಮತಗಿ ಭಾಗದ ಪ್ರಭಾವಿ ಮುಖಂಡರಾಗಿದ್ದು, ಕಳೆದ ಒಂದು ವರ್ಷದಿಂದ ಅವರನ್ನು ಪಕ್ಷದಿಂದ ಹೊರಹಾಕುವ ಒತ್ತಡ ಇತ್ತು ಎನ್ನಲಾಗಿದೆ. ಆದರೆ ಪ್ರಭಾವಿ ನಾಯಕರ ಬೆಂಬಲದಿಂದ ಉಚ್ಚಾಟನೆ ತಪ್ಪಿಸಿಕೊಂಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ತಟಸ್ಥ ನಿಲುವೇ ಕಾರಣ? :
ಉಪಚುನಾವಣೆಯಲ್ಲಿ ತಮಗೆ ಸೂಕ್ತ ಗೌರವ ಸಿಗುತ್ತಿಲ್ಲ, ತಮ್ಮನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನದಿಂದ ಮೂವರು ತಟಸ್ಥ ನಿಲುವು ತಾಳಿದ್ದರು ಎನ್ನಲಾಗಿದೆ. ಇದನ್ನೇ ಕೆಲವರು ಪಕ್ಷ ವಿರೋಧಿ ಚಟುವಟಿಕೆ ಎಂದು ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿದ್ದರು.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೂವರೂ ಮುಖಂಡರು ಪಕ್ಷದ ಪ್ರಭಾವಿ ಮುಖಂಡರ ಜತೆ ಒಳ್ಳೆಯ ರಾಜಕೀಯ ಒಡನಾಟ ಹೊಂದಿದ್ದಾರೆ. ಅವರ ಉಚ್ಚಾಟನೆ ತಡೆಗೆ ಪ್ರಭಾವಿಗಳು ಪ್ರಭಾವ ಬೀರಿದ್ದರಿಂದ ಉಚ್ಚಾಟನೆ ಕ್ರಮದಿಂದ ಅವರು ಪರಾಗಿದ್ದು, ಅಮಾನತು ಕ್ರಮಕ್ಕೆ ಒಳಗಾಗಿದ್ದಾರೆ.






