ಲಿಂಗಾಯತ ಧರ್ಮದ ಕುರಿತ ಹೇಳಿಕೆ: ವೀಣಾ ಬನ್ನಂಜೆಗೆ ಪೊಲೀಸ್ ನೋಟಿಸ್

ವೀಣಾ ಬನ್ನಂಜೆ
ಬಾಗಲಕೋಟೆ: ಅನುಭವ ಮಂಟಪದ ಅಸ್ತಿತ್ವವನ್ನು ಪ್ರಶ್ನಿಸಿ ವಿವಾದಕ್ಕೀಡಾದ ವೀಣಾ ಬನ್ನಂಜೆಗೆ ಪೊಲೀಸರು ನೋಟಿಸ್ ನೀಡಿರುವ ಘಟನೆ ವರದಿಯಾಗಿದೆ.
ಲಿಂಗಾಯತ ಧರ್ಮದ ಬಗ್ಗೆ ತಮ್ಮ ಯುಟ್ಯೂಬ್ ದಲ್ಲಿ ಮಾತನಾಡಿದ್ದ ಜಿಲ್ಲೆಯ ಕುಲಹಳ್ಳಿ ಗ್ರಾಮದ ಬಳಿರುವ ವೈದಿಕ ಧರ್ಮ ಪ್ರಚಾರಕಿ ವೀಣಾ ಬನ್ನಂಜೆ ವಿರುದ್ಧ ಲಿಂಗಾಯತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ವೀಣಾ ಬನ್ನಂಜೆಯ ವಿರುದ್ಧ ಜಮಖಂಡಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ರವಿ ಯಡಹಳ್ಳಿ ಅವರು ಜೂನ್ 20ರಂದು ಲಿಖಿತ ದೂರು ನೀಡಿದ್ದರು. ಈ ಹಿನ್ನೆಲೆ ವೀಣಾ ಬನ್ನಂಜೆಗೆ ಪೊಲೀಸರು ನೋಟಿಸ್ ನೀಡಿರುವ ಪೊಲೀಸರು ಕ್ಷಮಾಪಣೆ ಕೇಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಮಖಂಡಿ ಬಳಿಯ ಕುಲ್ಲಹಳ್ಳಿಯಲ್ಲಿರುವ ಸತ್ಯಕಾಮ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ವೀಣಾ ಬನ್ನಂಜೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ನಡೆಯುವ ಕಾರ್ಯಕ್ರಮ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದನ್ನು ಯುಟ್ಯೂಬ್ ದಲ್ಲಿ ಅಪ್ ಲೋಡ್ ಮಾಡುತ್ತಾರೆ. ಯೂಟ್ಯೂಬ್ ದ ವಿಡಿಯೋದಲ್ಲಿ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದು ವೀಣಾ ಅವರು ಹೇಳಿಕೆ ನೀಡಿರುವುದೇ ವಿವಾದಕ್ಕೆ ಕಾರಣವಾಗಿದೆ.
ಪೊಲೀಸರು ಮಾಹಿತಿ ನೀಡಿದ್ದರಿಂದ ಯೂಟ್ಯೂಬ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ವೀಣಾ ಬನ್ನಂಜೆ ಪೊಲೀಸರಿಗೆ ತಿಳಿಸಿದ್ದಾರೆ.
ಸತ್ಯಕಾಮ ಪ್ರತಿಷ್ಠಾನದ ಹೆಸರಿನಲ್ಲಿ ಪ್ರತಿ ವರ್ಷ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವೈದಿಕತೆ ಬಿತ್ತುವ ಕಾರ್ಯಕ್ರಮಗಳನ್ನು ಬನ್ನಂಜೆ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಿ ಸರಕಾರ ವೈಚಾರಿಕತೆ ಬಿತ್ತುವ ಕಾರ್ಯಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇಂತಹ ವಿವಾದಾತ್ಮಕ ಹೇಳಿಕೆಯಿಂದ ಇನ್ನೊಬ್ಬರ ಮನಸ್ಸು ನೋವಾಗುತ್ತದೆ ಎಂದು ನ್ಯಾಯವಾದಿ ರವಿ ಯಡಹಳ್ಳಿ ಅವರು ವಾರ್ತಾ ಭಾರತಿಗೆ ತಿಳಿಸಿದ್ದಾರೆ.