Bagalakote | ಯುವಕನನ್ನು ಕೊಲೆಗೈದು ಕಾರಿನ ಜೊತೆ ಸುಟ್ಟು ಹಾಕಿದ ದುಷ್ಕರ್ಮಿಗಳು

ಬಾಗಲಕೋಟೆ: ಯುವಕನೋರ್ವನನ್ನು ಕೊಲೆಗೈದು ಮೃತದೇಹವನ್ನು ಆತನದ್ದೇ ಕಾರಿನಲ್ಲಿರಿಸಿ ಸುಟ್ಟು ಹಾಕಿದ ಬೆಚ್ಚಿ ಬೀಳಿಸುವ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಬಳಿ ಸೋಮವಾರ ಸಂಜೆ ನಡೆದಿದೆ.
ಸೋಮಲಿಂಗ ಪಡಸಲಗಿ (36) ಕೊಲೆಯಾದ ಯುವಕ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಯಿಂದಲೇ ಸೋಮಲಿಂಗ ಅವರ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೃತರ ಸೋದರ ಸಂಬಂಧಿ ಸದಾಶಿವ ಪಡಸಲಗಿ, ರವಿ ಪಾಟೀಲ ಹಾಗೂ ನವಿ ಎಂಬವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಸೋಮಲಿಂಗ ಪಡಸಲಗಿ ಸೋಮವಾರ ಸಂಜೆ ಹೊಸ ಕಾರು ಖರೀದಿಸಿ ಪೂಜೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೊಲೆ ನಡೆದಿದೆ. ಸಾವಳಗಿ ಜಂಕ್ಷನ್ ಬಳಿ ಕಾಯ್ದು ಕುಳಿತಿದ್ದ ಸೋಮಲಿಂಗ ಅವರ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಹಾಗೂ ಇತರರು ಸೋಮಲಿಂಗ ಅವರ ಕಾರನ್ನು ಅಡ್ಡಗಟ್ಟಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಯುಧಗಳಿಂದ ಇರಿದು ಸೋಮಲಿಂಗರನ್ನು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರಿನಲ್ಲಿರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






