ನ್ಯಾಯ ಒದಗಿಸುವಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ರಾಷ್ಟ್ರದಲ್ಲೇ ಮೊದಲ ಸ್ಥಾನ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಬಾಗಲಕೋಟೆ: ನ್ಯಾಯ ಒದಗಿಸುವಲ್ಲಿ ರಾಜ್ಯ ಪೊಲೀಸ್ ಇಲಾಖೆಯು ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿದೆ. ‘ಇದು ನಮ್ಮ ಸರ್ಕಾರ ಹೇಳಿದ್ದಲ್ಲ. ಹೈದರಾಬಾದ್‌ನ ಸಂಸ್ಥೆಯೊಂದು ಅಧ್ಯಯನ ಮಾಡಿ ತಿಳಿಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಸೋಮವಾರ ನವನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ನಿರ್ಮಿಸಿರುವ ಧಾತ್ರಿ ಮಂಗಲ ಭವನ ಹಾಗೂ ಉತ್ಕರ್ಷ ಪೊಲೀಸ್ ನಿವಾಸ ಉದ್ಘಾಟಿಸಿ ಮಾತನಾಡಿದ ಅವರು, ಕೊಲೆ, ಅತ್ಯಾಚಾರ ಸೇರಿದಂತೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಇದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿರುವುದು ಗೊತ್ತಾಗುತ್ತದೆ. ಹಾಗೆಂದ ಮಾತ್ರಕ್ಕೆ ಅಪರಾಧಗಳು ನಡೆದಿಲ್ಲ ಎನ್ನುತ್ತಿಲ್ಲ. ಅವುಗಳ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗಿದೆ’ ಎಂದರು.
‘ಪೊಲೀಸ್ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಗೂ ಸಿಇಎನ್ ಪೊಲೀಸ್ ಠಾಣೆ ತೆರೆದ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಠಾಣೆಗಳ ಆಧುನೀಕರಣ ಮಾಡಲಾಗುತ್ತಿದೆ. ಜತೆಗೆ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. 10 ಸಾವಿರ ಮನೆಗಳ ನಿರ್ಮಾಣ ಮಾಡಲಾಗಿದೆ. ಶೇ40ರಷ್ಟು ಪೊಲೀಸರಿಗೆ ವಸತಿ ಸೌಲಭ್ಯ ದೊರೆತಿದೆ. ಮುಖ್ಯಮಂತ್ರಿ ಅವರು ಮತ್ತಷ್ಟು ಮನೆಗಳ ನಿರ್ಮಾಣಕ್ಕೆ ₹400 ಕೋಟಿ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಆರೋಗ್ಯ ತಪಾಸಣೆಗೆ ನೀಡಲಾಗುತ್ತಿದ್ದ ₹1 ಸಾವಿರವನ್ನು ₹1,500ಕ್ಕೆ ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.