Bagalkote | ನೀರಿನ ಸಂಪ್ ಗೆ ಬಿದ್ದು 18 ತಿಂಗಳ ಮಗು ಮೃತ್ಯು

ಬಾಗಲಕೋಟೆ: ನವನಗರದ ಸೆಕ್ಟರ್-38ರಲ್ಲಿ 18 ತಿಂಗಳ ಹೆಣ್ಣು ಮಗುವೊಂದು ನೀರಿನ ಸಂಪ್‌ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಅಮೀನಾ ಪಟಾಣ್ ಎಂಬ ಮಗು ಆಟವಾಡುತ್ತಿದ್ದ ವೇಳೆ ಎದುರಿನ ಮನೆಯ ಸಂಪ್‌ಗೆ ಬಿದ್ದು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಗುವಿನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ಈ ನಡುವೆ, ನೀರಿನಲ್ಲಿ ಮುಳುಗಿದವರನ್ನು ಉಪ್ಪಿನಲ್ಲಿ ಮುಳುಗಿಸಿದರೆ ಜೀವ ಮರಳಿ ಬರುತ್ತದೆ ಎಂಬ ಮೂಢನಂಬಿಕೆಗೆ ಒಳಗಾಗಿ, ಪೋಷಕರು ಮಗುವಿನ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದರು. ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು ಮಗು ಬದುಕಿ ಬರಲೆಂದು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದರು.
ಸುಮಾರು ಎರಡು ಗಂಟೆಗಳ ಕಾಲ ಈ ಪ್ರಯತ್ನ ಮುಂದುವರಿದಿದ್ದು, ಬಳಿಕ ವೈದ್ಯರು ಪೋಷಕರಿಗೆ ಪರಿಸ್ಥಿತಿಯ ಕುರಿತು ಸಮರ್ಪಕ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟ ಬಳಿಕ ಮೃತದೇಹದ ಅಂತ್ಯ ಸಂಸ್ಕಾರ ಮಾಡಲಾಯಿತು ಎಂದು ತಿಳಿದು ಬಂದಿದೆ.




