ಮತದಾರರ ಪಟ್ಟಿಯ ವಿಚಾರ: ಹುನಗುಂದದಲ್ಲಿ ಹಾಲಿ–ಮಾಜಿ ಶಾಸಕರ ಆರೋಪ–ಪ್ರತ್ಯಾರೋಪ

ಬಾಗಲಕೋಟೆ: ಮತದಾರರ ಪಟ್ಟಿಯ ವಿಚಾರವಾಗಿ ಹುನಗುಂದ ಮತಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಆರೋಪ–ಪ್ರತ್ಯಾರೋಪ ತೀವ್ರಗೊಂಡಿದ್ದು, ಸಾರ್ವಜನಿಕ, ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಪಕ್ಷದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ ನಡುವೆ ಮಾತಿನ ಸಮರ ಜೋರಾಗಿದ್ದು, ಪರಸ್ಪರ ಏಕವಚನದಲ್ಲಿ ನಿಂದನೆ ಮಾಡುವ ಹಂತಕ್ಕೂ ತಲುಪಿದೆ.
ಹುನಗುಂದ ಮತಕ್ಷೇತ್ರದ ಮುರಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಇದಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಅವರ ಬೆಂಬಲಿಗರ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು, ಜಿಲ್ಲಾ ಆಡಳಿತ ಭವನದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು. ಹುನಗುಂದ ಮತಕ್ಷೇತ್ರದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಕ್ರಮಗಳು ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳಿಗಿಂತ ಹಾಲಿ ಶಾಸಕರ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಗಂಭೀರ ಆರೋಪ ಮಾಡಿದರು.
ಈ ಆರೋಪಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ, ಗರಂ ಆಗಿ ಏಕವಚನದಲ್ಲಿ ಮಾಜಿ ಶಾಸಕರನ್ನು ನಿಂದಿಸಿದ್ದಾರೆ. “ದೊಡ್ಡನಗೌಡರು ಅಲ್ಲ, ದಡ್ಡ ಗೌಡರು” ಎಂದು ಕುಟುಕಿದ ಅವರು, 2025ರ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ 17 ವರ್ಷ ತುಂಬಿದವರ ಹೆಸರನ್ನು ನೋಂದಣಿ ಮಾಡಲು ಅವಕಾಶ ಇರುತ್ತದೆ. 2025ರಲ್ಲಿ ಯಾವುದೇ ಚುನಾವಣೆ ಇಲ್ಲ. 18 ವರ್ಷ ಪೂರ್ತಿಯಾದ ನಂತರ ಮಾತ್ರ ಚುನಾವಣಾ ಆಯೋಗ ಮತದಾರ ಗುರುತಿನ ಚೀಟಿ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಇರುವುದಿಲ್ಲ. ಹೀಗಾಗಿ ಒಂದು ಕುಟುಂಬದವರಿಗೆ ಒಂದೇ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿರುವುದು ಸಹಜ. ಇದನ್ನು ಆಧಾರವನ್ನಾಗಿ ಮಾಡಿಕೊಂಡು ತಪ್ಪು ಆರೋಪ ಮಾಡಲಾಗುತ್ತಿದೆ ಎಂದು ಅವರು ತಿರುಗೇಟು ನೀಡಿದರು.
ಇದೇ ವೇಳೆ ಮಾತನಾಡಿದ ಕಾಶಪ್ಪನವರ, “ನಿಮ್ಮ ಹೆಸರು ನಾಲ್ಕು ಮತಗಟ್ಟೆಗಳಲ್ಲಿ ಇರುವುದಕ್ಕೂ, ನಿಮ್ಮ ಪುತ್ರನ ಹೆಸರು ಏಳು ಕಡೆಗಳಲ್ಲಿ ಇರುವುದಕ್ಕೂ ದಾಖಲೆ ಸಮೇತ ಸಾಕ್ಷಿ ನೀಡುತ್ತೇನೆ. ಧೈರ್ಯ ಇದ್ದರೆ ಸಾರ್ವಜನಿಕ ಚರ್ಚೆಗೆ ಬನ್ನಿ” ಎಂದು ಸವಾಲು ಹಾಕಿದರು.







