ಆನೇಕಲ್ | ರೌಡಿ ಶೀಟರ್ ನ ಕಾಲಿಗೆ ಗುಂಡಿಕ್ಕಿ ಬಂಧನ

ಆನೇಕಲ್: ಕೊಲೆ ಪ್ರಕರಣದ ಆರೋಪಿ, ರೌಡಿಶೀಟರ್ ಓರ್ವನನ್ನು ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 5:30ರ ಸುಮಾರಿಗೆ ನಡೆದಿದೆ.
ರೌಡಿ ಶೀಟರ್ ಗುಬ್ಬಚ್ಚಿ ಸೀನ
ರೌಡಿ ಶೀಟರ್ ಗುಬ್ಬಚ್ಚಿ ಸೀನ ಪೊಲೀಸ್ ಗುಂಡೇಟಿನಿಂದ ಗಾಯಗೊಂಡಾತ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮುಂಜಾನೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಸೀನ ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಈ ವೇಳೆ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 28ರಂದು ದೊಮ್ಮಸಂರ ಸಂತೆ ಮೈದಾನದಲ್ಲಿ ನಡೆದಿದ್ದ ಮಾಜಿ ರೌಡಿ ಶೀಟರ್ ಮುಸರಿ ವೆಂಕಟೇಶನ ಕೊಲೆ ಪ್ರಕರಣದಲ್ಲಿ ಗುಬ್ಬಚ್ಚಿ ಸೀನ ಆರೋಪಿಯಾಗಿದ್ದ. ಇಂದು ಮುಂಜಾನೆ ಈತ ಸರ್ಜಾಪುರದ ದೊಮ್ಮಸಂದ್ರದ ಬಳಿಯಿರುವ ಬೇಕರಿಯಿಂದ ತೆರಳುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಇನ್ ಸ್ಪೆಕ್ಟರ್ ನವೀನ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಇರ್ಫಾನ್ ಕಲಾರಿ ಮೇಲೆ ಹಲ್ಲೆಗೈಯಲು ಯತ್ನಿಸಿದ್ದಾನೆ. ಇರ್ಫಾನ್ ಕಲಾರಿ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ನವೀನ್ ಎಚ್ಚರಿಕೆ ನೀಡಿ ಶರಣಾಗುವಂತೆ ಮನವಿ ಮಾಡಿದ್ದರೂ ಕೇಳದ ಹಿನ್ನೆಲೆಯಲ್ಲಿ ಆತನ ಕಾಲಿಗೆ ಗುಂಡು ಹಾರಿಸಿದ ಇನ್ ಸ್ಪೆಕ್ಟರ್ ನವೀನ್ ಅವರು ಗುಬ್ಬಚ್ಚಿ ಸೀನನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಬಾಬಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.