ಹೊಸಕೋಟೆ | ಆಂಧ್ರಪ್ರದೇಶದ ಸಾರಿಗೆ ಬಸ್-ಲಾರಿ ನಡುವೆ ಭೀಕರ ಅಪಘಾತ: ನಾಲ್ವರು ಮೃತ್ಯು

ಹೊಸಕೋಟೆ : ಆಂಧ್ರಪ್ರದೇಶದ ಸಾರಿಗೆ ಬಸ್ವೊಂದು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಗೊಟ್ಟಿಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.
ಘಟನೆಯಲ್ಲಿ ಬಸ್ನಲ್ಲಿದ್ದ ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಮೃತಟಪಟಿದ್ದಾರೆ. ಘಟನೆಯಲ್ಲಿ ಇತರ 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಓವರ್ಟೇಕ್ ಮಾಡುವ ಭರದಲ್ಲಿ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಸಾರಿಗೆ ಬಸ್, ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯಾದ ರಭಸಕ್ಕೆ ಬಸ್‌ನ ಮುಂಭಾಗ ಹಾಗೂ ಬಸ್‌ನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಹಾಗೂ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.