ಕಾಲ್ತುಳಿತ ಪ್ರಕರಣ| ಬಕ್ರೀದ್ ಪ್ರಾರ್ಥನೆಯಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ. 7: ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಕ್ರೀದ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದೆ ತಮ್ಮ ಮನೆಯಲ್ಲೇ ಉಳಿದರು.
ಸಾಮಾನ್ಯವಾಗಿ ಬಕ್ರೀದ್, ರಮಝಾನ್ ಹಬ್ಬಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವುದು ವಾಡಿಕೆ. ಸಿಎಂ ಆದಾಗಿನಿಂದಲೂ ಎಂದೂ ಪ್ರಾರ್ಥನೆಯಿಂದ ದೂರ ಉಳಿದಿರಲಿಲ್ಲ. ವಿಪಕ್ಷ ನಾಯಕರಾಗಿದ್ದಾಗಲೂ ಪ್ರಾರ್ಥನೆಯಲ್ಲಿ ಭಾಗವಹಿಸಿ ಶುಭ ಹಾರೈಸುತ್ತಿದ್ದರು.
ಆದರೆ, ಇದೇ ಮೊದಲ ಬಾರಿಗೆ ಕಾಲ್ತುಳಿತ ಪ್ರಕರಣ ಸರಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ವಸತಿ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಪ್ರತೀ ಹಬ್ಬದ ಸಂದರ್ಭದಲ್ಲೂ ಮುಖ್ಯಮಂತ್ರಿಯನ್ನು ಈದ್ಗಾ ಮೈದಾನಕ್ಕೆ ಕರೆದುಕೊಂಡು ಪ್ರಾರ್ಥನೆಯಲ್ಲಿ ಭಾವಹಿಸುವಂತೆ ಮಾಡುತ್ತಿದ್ದರು.
ಸಿಎಂ ಸಿದ್ದರಾಮಯ್ಯ ಅವರನ್ನು ಸಾಮೂಹಿಕ ಪ್ರಾರ್ಥನೆಗೆ ಕರೆದುಕೊಂಡು ಹೋಗಲು ಸಚಿವ ಝಮೀರ್ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಆದರೆ ಎಲ್ಲೂ ಬರುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಮನೆಯಲ್ಲೇ ಉಳಿದಿದ್ದರು ಎಂದು ಮೂಲಗಳು ತಿಳಿಸಿವೆ.