ಹಲವು ವಿಧೇಯಕಗಳು ಹಾಗೂ ನಿಯಮಗಳಿಗೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು, ಆ.7: 2025ನೆ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಹಕಾರ ಸಂಘಗಳು (ತಿದ್ದುಪಡಿ) ವಿಧೇಯಕ, ಕರ್ನಾಟಕ ಬಂದರು (ಲ್ಯಾಂಡಿಂಗ್ ಮತ್ತು ಶಿಪ್ಪಿಂಗ್ ಫೀಸ್) (ತಿದ್ದುಪಡಿ) ವಿಧೇಯಕ, ಕರ್ನಾಟಕ ಸರಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ವಿಧೇಯಕಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇತರ ವಿಧೇಯಕಗಳು: ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ವಿಧೇಯಕ, ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕ.
ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ, ಕರ್ನಾಟಕ ಅಪರಾಧ ಮುಕ್ತಗೊಳಿಸುವಿಕೆ (ಉಪಬಂಧಗಳ ತಿದ್ದುಪಡಿ) ವಿಧೇಯಕ,
ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಅನುಕೂಲತೆ ಮತ್ತು ನಿಯಂತ್ರಣಾ) (ತಿದ್ದುಪಡಿ) ವಿಧೇಯಕ, ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ.
ಗದಗ-ಬೆಟಗೇರಿ ವಾಣಿಜ್ಯ, ಸಾಂಸ್ಕೃತಿಕ ಮತ್ತು ಪ್ರದರ್ಶನ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ನಿಯಮ ರದ್ದು: ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಂಯೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ.50 ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ತೆಗೆದು ಹಾಕಲು ಸಚಿವ ಸಂಪುಟ ನಿರ್ಣಯಿಸಿದೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ವಯೋಮಿತಿಯನ್ನು ಕನಿಷ್ಠ 40 ವರ್ಷ ಹಾಗೂ ಸದಸ್ಯರ ವಯೋಮಿತಿಯನ್ನು ಕನಿಷ್ಠ 35 ವರ್ಷ ಎಂದು ನಿಗಧಿಪಡಿಸುವ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಅವರಿಗೆ ಇರಬೇಕಾದ ಅನುಭವದ ಅವಧಿಯನ್ನು ಐದು ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ತಿದ್ದುಪಡಿ) ನಿಯಮಗಳು, 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.







