ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಐದು ವಿದ್ಯಾರ್ಥಿನಿಯರು ಆಯ್ಕೆ

ಬೆಂಗಳೂರು, ಆ.7: ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ರಾಜ್ಯದ ಐದು ಮಂದಿ ಪದವೀಧರ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು, ಈ ಪದವೀಧರೆಯರು ತಮ್ಮ ಆಯ್ಕೆಯ ಬ್ರಿಟನ್‍ನ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಪರಿಷತ್ತಿನ ಸಭಾಂಗಣದಲ್ಲಿ 2025-26ನೇ ಸಾಲಿನಲ್ಲಿ ಚಿವೆನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನವನ್ನು ಪಡೆದಿರುವ ರಾಜ್ಯದ ವಿದ್ಯಾರ್ಥಿನಿಯರ ಹೆಸರನ್ನು ಪ್ರಕಟಿಸಿ ಅವರು ಮಾತನಾಡಿದರು.
ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನದಡಿ ವಿದೇಶಿ ಶಿಕ್ಷಣ ಪಡೆಯಲು ಪ್ರತಿಯೊಬ್ಬರಿಗೂ ತಗುಲುವ ಒಟ್ಟು ಅಂದಾಜು ವೆಚ್ಚ 40 ಲಕ್ಷ ರೂ.ಗಳಾಗಿದೆ. ಇದರಲ್ಲಿ 20 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಮತ್ತು ಉಳಿದ 20 ಲಕ್ಷ ರೂ.ಗಳನ್ನು ಬ್ರಿಟಿಷರ್ ಹೈಕಮಿಷನ್ ಭರಿಸಲಿದೆ ಎಂದು ಅವರು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಶಿಕ್ಷಣವನ್ನು ಪ್ರೋ ತ್ಸಾಹಿಸುವ ಉದ್ದೇಶದಿಂದ ಬ್ರಿಟಿಷ್ ಹೈಕಮಿಷನ್ ಸಹಭಾಗಿತ್ವದಲ್ಲಿ ಸ್ಥಾಪಿತವಾದ ಚಿವೆನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನದ ಕಾರ್ಯಕ್ರಮ ಮುಂದಿನ ಮೂರು ವರ್ಷಗಳವರೆಗೆ ಅನುಷ್ಠಾ ನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ 5 ಜನ ಪದವೀಧರ ವಿದ್ಯಾರ್ಥಿನಿಯರು, ಬ್ರಿಟನ್ನಿನ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ತಮ್ಮ ಆಯ್ಕೆಯ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಲು ತಗುಲುವ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು. ಈ ಕಾರ್ಯಕ್ರಮದಿಂದ ಒಟ್ಟು ರಾಜ್ಯದ 15 ಜನ ಪದವೀಧರೆಯರು ಪ್ರಯೋಜನ ಪಡೆಯಲಿದ್ದಾರೆ ಎಂದು ಸಚಿವರು ವಿವರಿಸಿದರು.
ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನದ ಐದು ಮಹಿಳಾ ವಿದ್ವಾಂಸರ ಮೊದಲ ತಂಡ ಶೀಘ್ರದಲ್ಲೇ ಯುಕೆಗೆ ತೆರಳಲಿದ್ದು, ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಚೆವೆನಿಂಗ್ ಕೊಡುಗೆಯನ್ನು ಪಡೆದ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕ ಎಂದು ನನಗೆ ಸಂತೋಷವಾಗಿದೆ. ಈ ವಿದ್ಯಾರ್ಥಿವೇತನವು ಭಾರತದಾದ್ಯಂತದ ವಿದ್ವಾಂಸರು ಮತ್ತು ಫೆಲೋಗಳಿಗೆ ಸಹಾಯ ಮಾಡಿದೆ. ವಿಶೇಷವಾಗಿ ಶ್ರೇಣಿ -2 ಮತ್ತು ಶ್ರೇಣಿ -3 ಪಟ್ಟಣಗಳು ಮತ್ತು ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು
•ನೀಹಾರಿಕಾ ನರೇಶ್
•ಸುಷ್ಮಾ ಶಾಮಸುಂದರ್
•ಚಂದನಾ ಆಂಜಿನಪ್ಪ
•ಅತೀನಾರೋಸ್ ಜೋಸೆಫ್
•ಶ್ವೇತಾ ನಾಗಪತಿ ಹೆಗಡೆ







