ದೇಶಾದ್ಯಂತ ಮತದಾನ ಅಕ್ರಮ ಬಹಿರಂಗಕ್ಕೆ ಕರ್ನಾಟಕ ನೆಲದಲ್ಲಿ ಮುನ್ನುಡಿ: ಡಿಸಿಎಂ ಡಿಕೆಶಿ

ಬೆಂಗಳೂರು, ಆ.8: “ಸಂವಿಧಾನ, ಮತದಾನದ ಹಕ್ಕು ರಕ್ಷಣೆಗೆ ರಾಹುಲ್ ಗಾಂಧಿ ದಿಟ್ಟ ಹೋರಾಟ ಆರಂಭಿಸಿದ್ದಾರೆ. ಅದಕ್ಕೆ ನಮ್ಮೆಲ್ಲರ ಒಕ್ಕೊರಲ ಬೆಂಬಲವಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಚುನಾವಣೆ ಆಯೋಗ ಪ್ರಾಯೋಜಿತ ಮತ ಅಕ್ರಮದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
''ರಾಹುಲ್ ಗಾಂಧಿ ಅವರು ದೇಶದ ಸಂವಿಧಾನ ರಕ್ಷಣೆಗೆ ನಮ್ಮ ಮತ, ನಮ್ಮ ಹಕ್ಕು, ರಕ್ಷಣೆಗೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಅವರು ದೇಶದ ಪರವಾಗಿ ದಿಟ್ಟ ಹೋರಾಟ ಆರಂಭಿಸಿದ್ದಾರೆ. ದೇಶಾದ್ಯಂತ ಮತ ಅಕ್ರಮ ಬಯಲಿಗೆಳೆಯಲು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ” ಎಂದು ತಿಳಿಸಿದರು.
“ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐಸಿಸಿ ಮಾನವ ಹಕ್ಕು ವಿಭಾಗದ ಸಭೆಯಲ್ಲಿ ರಾಹುಲ್ ಗಾಂಧಿ ಅವರು, ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಣೆ ಮಾಡಲು, ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ ಲೀಗಲ್ ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅವರ ಸೂಚನೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ” ಎಂದು ಹೇಳಿದರು.





