ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ

ಬೆಂಗಳೂರು : ರವಿವಾರ ಮಧ್ಯಾಹ್ನ ನಗರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಸಾರ್ವಜನಿಕ ಪ್ರಯಾಣಿಕರು ಪರದಾಡಿದರು. ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಸದಾಶಿವನಗರ, ಹೆಬ್ಬಾಳ, ಬಸವನಗುಡಿ, ಬನಶಂಕರಿ, ಚಂದ್ರಾ ಲೇಔಟ್, ಕೋರಮಂಗಲ, ಕೋಣನ ಕುಂಟೆ, ಲಾಲ್‍ಬಾಗ್, ಶಾಂತಿನಗರ, ಜಯನಗರ, ವಿಜಯನಗರ, ಜೆ.ಪಿ.ನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.
ದಿಢೀರನೆ ಅಬ್ಬರದ ಮಳೆ ಬಂದಿದ್ದರಿಂದ ಜನರು ಬಸ್ ನಿಲ್ದಾಣ, ಅಂಗಡಿಗಳ ಎದುರು ಕೆಲ ಗಂಟೆ ಆಸರೆ ಪಡೆದರು. ಇನ್ನು, ಛತ್ರಿ ಹಿಡಿದು ಜನರು ಓಡಾಡುತ್ತಿರುವ ದೃಶ್ಯಗಳು ಕಂಡುಬಂದವು. ಮಳೆಯಿಂದ ಸ್ಕೈ ವಾಕ್, ಬ್ರಿಡ್ಜ್ ಗಳ ಕೆಳಗೆ ಬೈಕ್ ಸವಾರರು ಆಸರೆ ಪಡೆದುಕೊಂಡಿದ್ದರು. ನಗರದ ಕೆಲ ರಸ್ತೆಯಲ್ಲಿ ಡ್ರೈನೇಜ್‍ನ ಕೊಳಚೆ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ವರಮಹಾಲಕ್ಷ್ಮಿ ಹಬ್ಬ ಕಳೆದು ಮೂರು ದಿನವಾದರೂ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಕಸದ ರಾಶಿ ಹಾಗೇ ಬಿದ್ದಿದ್ದು, ಮಳೆ ಬಿದ್ದ ಪರಿಣಾಮ ಕಸದ ರಾಶಿ ಗಬ್ಬೆದ್ದು ನಾರುತ್ತಿದೆ. ಇನ್ನು ರಾಮಮೂರ್ತಿ ನಗರ ಸಿಗ್ನಲ್ ಬಳಿ ನೀರು ನಿಂತಿತ್ತು. ಓಎಂಆರ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕೆಆರ್‍ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಹಾಗೇ ವಡ್ಡರಪಾಳ್ಯದಿಂದ ಹೆಣ್ಣೂರು ಕಡೆಗೆ ಮತ್ತು ವಡ್ಡರಪಾಳ್ಯದಿಂದ ಗೆದ್ದಲಹಳ್ಳಿ ಎರಡೂ ಕಡೆ ನಿಧಾನಗತಿಯ ಸಂಚಾರವಿತ್ತು.
ಸಂಚಾರಿ ಪೊಲೀಸರು ನಿಧಾನವಾಗಿ ಸಂಚಾರ ಮಾಡುವಂತೆ ವಾಹನ ಸವಾರರಿಗೆ ಸೂಚನೆ ನೀಡಿದ್ದರು. ಥಣಿಸಂದ್ರಯಿಂದ ನಾಗವಾರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ. ನಾಗವಾರ ಜಂಕ್ಷನ್ ಯಿಂದ ಥಣಿಸಂದ್ರ ಕಡೆಗೆ ನಿಧಾನಗತಿಯ ಸಂಚಾರವಿದೆ. ಸಿಟಿ ಮಾರ್ಕೆಟ್ ವೃತ್ತ ದಿಂದ ಎಸ್‍ಜೆಪಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿದೆ. ಬಾಗಲೂರು ಕ್ರಾಸ್ ಯಿಂದ Iಂಈ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ. ಹೆಬ್ಬಾಳ ದಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರವಿದೆ. ಹೆಬ್ಬಾಳದಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಸೂಚನೆ ನೀಡಿದ್ದರು.
ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.







