‘ಒಳಮೀಸಲಾತಿ’ ವರದಿ ಏಕಪಕ್ಷೀಯವಾಗಿ ಅನುಮೋದನೆ ಮಾಡಿದರೆ ಹೋರಾಟ : ಎಚ್ಚರಿಕೆ

ಬೆಂಗಳೂರು, ಆ.12: ಪರಿಶಿಷ್ಟರ ಒಳಮೀಸಲಾತಿ ಸಂಬಂಧದ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಏಕಪಕ್ಷೀಯವಾಗಿ ಅನುಮೋದನೆ ಮಾಡಬಾರದು. ಅನುಮೋದನೆ ಮಾಡಿದರೆ ಸರಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಗಾಂಧಿ ಭವನದಲ್ಲಿ ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯ ಕುರಿತು ಚರ್ಚಿಸಲು ಹೊಲೆಯ/ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ ಮತ್ತಿತರ ಸಮುದಾಯಗಳ ಮುಖಂಡರು, ಚಿಂತಕರು ಸೇರಿ ‘ಒಳಮೀಸಲಾತಿ ಸಮೀಕ್ಷಾ ವರದಿಯ ವಾಸ್ತವಿಕತೆ ಮತ್ತು ಭವಿಷ್ಯದ ನಿರ್ಧಾರ’ ರಾಜ್ಯ ಮಟ್ಟದ ಚಿಂತನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಹೋರಾಟಗಾರರಾದ ಪ್ರಕಾಶ್ ರಾಠೋಡ್, ಜಿ.ಚಂದ್ರಪ್ಪ, ಡಾ.ಚಂದ್ರಶೇಖರಯ್ಯ, ನಾಗ ಸಿದ್ದಾರ್ಥ ಹೊಲೆಯರ್, ಆದರ್ಶ ಯಲ್ಲಪ್ಪ, ಶಿವಾನಂದ ಭಜಂತ್ರಿ, ಡಾ.ಬಿ.ಟಿ.ಲಲಿತಾ ನಾಯಕ್, ಜಯದೇವನಾಯ್ಕ, ರವಿಕುಮಾರ್, ಅನಂತ್ ನಾಯ್ಕ, ಅನಿಲ್ ರಾಥೋಡ್, ನಂಜಾ ನಾಯ್ಕ್, ರುದ್ರ ಪುನೀತ್ ಸಹಿತ ಹಲವರು ಭಾಗವಹಿಸಿದ್ದರು.
ಸೋರಿಕೆಯಾಗಿರುವ ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯಲ್ಲಿನ ಅಂಶಗಳು ಅಪೂರ್ಣ, ಅವೈಜ್ಞಾನಿಕ, ಅಸ್ಪಷ್ಟ ದತ್ತಾಂಶ ಮತ್ತು ನ್ಯಾಯ ಸಮ್ಮತವಲ್ಲದ ಶಿಫಾರಸುಗಳನ್ನು ಒಳಗೊಂಡಿರುವುದು ಕಂಡು ಬರುತ್ತಿವೆ. ಹಾಗಾಗಿ 50 ವರ್ಷಗಳಿಂದ 101 ಸಮುದಾಯಗಳ ಸ್ಥಿತಿಗತಿಗಳ ಮಾಹಿತಿ, ಈ ಸಮೀಕ್ಷೆಯ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು. ಪರಿಶಿಷ್ಠ ಜಾತಿ ಪಟ್ಟಿಯಲ್ಲಿನ 101 ಸಮುದಾಯಗಳಿಂದ ಆಕ್ಷೇಪ ಸ್ವೀಕರಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಸಮಿತಿ ತೀರ್ಮಾನಿಸಿತು.
ವರದಿಯಲ್ಲಿ ಹೊಲೆಯ, ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸಮಗಾರ, ಚಮ್ಮಾರ ಮತ್ತಿತರ ಸಮುದಾಯಗಳಿಗೆ ಅನ್ಯಾಯವಾಗಿರುವುದು ಕಂಡು ಬಂದಿದೆ. ಇದನ್ನು ಏಕಪಕ್ಷೀಯವಾಗಿ ಅಂಗೀಕಾರ ಮಾಡಬಾರದು. ಹೊಸ ಆಯೋಗ ಅಥವಾ ಸದನ ಸಮಿತಿ ರಚಿಸುವ ಮೂಲಕ ಇದನ್ನು ಸರಿಪಡಿಸಲು ಸರಕಾರ ಮುಂದಾಗಬೇಕು. ಈ ಮೇಲ್ಕಂಡ ಸಮುದಾಯಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಎಲ್ಲ ಶಾಸಕರಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಗಳನ್ನು ಮಾಡಿಕೊಳ್ಳಲಾಯಿತು.
ಪರಿಶಿಷ್ಟ ಜಾತಿಗಳ ಐಕ್ಯ ಮತ್ತು ಒಗ್ಗಟ್ಟನ್ನು ಕಾಪಾಡಿಕೊಂಡು ಸಾಂವಿಧಾನಿಕ ಅವಕಾಶಗಳನ್ನು ಒಗ್ಗೂಡಿ ಪಡೆದುಕೊಳ್ಳಬೇಕು. ಯಾರು ಹೆಚ್ಚು ಅವಕಾಶಗಳಿಂದ ವಂಚಿತರಾಗಿದ್ದಾರೋ, ಅವರಿಗೆ ಆದ್ಯತೆ ನೀಡುವಂತೆ ನೋಡಿಕೊಳ್ಳಬೇಕು. ವರದಿಯಲ್ಲಿ ಲೋಪದೋಷಗಳಿದ್ದಲ್ಲಿ, ಅವುಗಳನ್ನು ವೈಜ್ಞಾನಿಕವಾಗಿ ಸಮಾಲೋಚಿಸಿ ಸಮರ್ಪಕವಾಗಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು.
-ಮಾವಳ್ಳಿ ಶಂಕರ್,ದಸಂಸ ಪ್ರಧಾನ ಸಂಚಾಲಕ







