ಬೆಂಗಳೂರು | ಮುಂದುವರಿದ ‘ಆಶಾ ಕಾರ್ಯಕರ್ತೆಯರ ಧರಣಿ’

ಬೆಂಗಳೂರು, ಆ.13: ಮಾಸಿಕ ಕನಿಷ್ಠ 10ಸಾವಿರ ರೂ.ನೀಡಲು ಆದೇಶ ಮಾಡಬೇಕು ಹಾಗೂ ಬಜೆಟ್‍ನಲ್ಲಿ ಇತರರಿಗೆ ಹೆಚ್ಚಿಸಿರುವಂತೆ 1ಸಾವಿರ ರೂ.ಗೌರವ ಧನ ಹೆಚ್ಚಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಧರಣಿ 2ನೇ ದಿನ ಮಳೆಯ ನಡುವೆಯೂ ಮುಂದುವರಿದಿದೆ.
ಸುಮಾರು 2000 ಆಶಾ ಫೆಸಿಲಿಟೇಟರ್‍ಗಳನ್ನು ಸೇವೆಯಲ್ಲಿ ಮುಂದುವರಿಸಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳದಲ್ಲಿ ಇರುವಂತೆ 5 ಲಕ್ಷ ರೂ. ಪರಿಹಾರ ಧನ ನೀಡಬೇಕು. ಆಂಧ್ರ ಪ್ರದೇಶದ ರಾಜ್ಯದಲ್ಲಿ ಆಶಾಗಳಿಗೆ ಎರಡು ಹೆರಿಗೆಗಳವರೆಗೆ ಆದಾಯ ಸಹಿತ 6 ತಿಂಗಳ ರಜೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿನಿರತ ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು.
ಇದೇ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಅಭಿಯಾನದ ಕಾರ್ಯಕ್ರಮ ಅಧಿಕಾರಿ ಪ್ರಭುದೇವ ಗೌಡ ಅವರು ಎನ್‍ಎಚ್‍ಎಂ ಪರವಾಗಿ ಮನವಿ ಸ್ವೀಕರಿಸಿ, ಸರಕಾರ ಮತ್ತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಪ್ರತಿಕ್ರಿಯೆ ನೀಡುವುದಾಗಿ ಭರವಸೆ ನೀಡಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಸೇರಿದಂತೆ ಅನೇಕ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.





