ಸದನದಲ್ಲಿ ಪದಗಳ ಪ್ರಯೋಗ ಬಗ್ಗೆ ಎಚ್ಚರಿಕೆ ಅಗತ್ಯ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆ.13: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಾವು ಸದನದಲ್ಲಿ ಬಳಸುವಂತಹ ಪದಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ನಮ್ಮ ನಡೆ, ನುಡಿಗಳನ್ನು ಜನತೆ, ವಿದ್ಯಾರ್ಥಿಗಳು ನೋಡುತ್ತಿರುತ್ತಾರೆ. ಆದುದರಿಂದ, ಪ್ರತಿಯೊಬ್ಬರೂ ತಾವು ಹೇಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್ ನಡುವೆ ನಡೆದಂತಹ ವಾಗ್ವಾದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸರಕಾರದ ವಿರುದ್ಧ ಟೀಕೆ ಮಾಡಲು ನಮ್ಮ ವಿರೋಧವಿಲ್ಲ. ಆದರೆ, ಪದ ಪ್ರಯೋಗ ಮಾಡುವಾಗ, ವಿಷಯಾಂತರ ಮಾಡುವುದು, ವೈಯಕ್ತಿಕ ದ್ವೇಷ ತೀರಿಸಿಕೊಳ್ಳುವ ರೀತಿ ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಟೀಕೆಗಳು ರಚನಾತ್ಮಕವಾಗಿ ಇರಬೇಕು. ಸರಕಾರ ನಡೆಸುತ್ತಿರುವವರು ಏನು ಹೇಳಬೇಕೋ ವಸ್ತು ಸ್ಥಿತಿ ತಿಳಿಸುತ್ತೇವೆ. ನಾವು ಯಾರು ಕೂಡ ಬೃಹಸ್ಪತಿಗಳಲ್ಲ. ಹೊಸ ಸದಸ್ಯರು ಅನೇಕ ಮಂದಿ ಈ ಸದನಕ್ಕೆ ಬಂದಿದ್ದಾರೆ. ಅವರಿಗೆ ಹಿರಿಯರಾದ ನಾವು ಮಾದರಿಯಾಗಿರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಎರಡು ಲೋಕಸಭಾ ಚುನಾವಣೆ ಸೇರಿದಂತೆ ಒಟ್ಟು 13 ಚುನಾವಣೆಗಳನ್ನು ಎದುರಿಸಿದ್ದೇನೆ. ಸಂಸತ್ತಿಗೆ ಹೋಗಬೇಕು ಅನ್ನೋ ಆಸೆ ಇತ್ತು. ಆದರೆ, ಜನ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿದ್ದರಿಂದ ಮುಂದೆ ಲೋಕಸಭಾ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದೆ ಎಂದು ಅವರು ಹೇಳಿದರು.
ಅಶ್ವತ್ಥ ನಾರಾಯಣ ಅವರ ಗಂಟಲು ಜೋರಾಗಿದೆ. ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಜಾರ್ಜ್ ಹಿರಿಯ ಸದಸ್ಯ ಅವರ ವಿರುದ್ಧ ಆರೋಪ ಮಾಡುವಾಗ ಏಕ ವಚನದಲ್ಲಿ ಮಾತನಾಡುವುದು, ಅಸಮರ್ಥ ಅನ್ನೋದು ಸರಿಯಲ್ಲ. ಇನ್ನು ಮುಂದೆ ನಮ್ಮ ಸದನ ಬೇರೆಯವರಿಗೆ ಮಾದರಿಯಾಗುವ ರೀತಿಯಲ್ಲಿ ನಡೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
‘ನಮ್ಮ ರಾಜ್ಯದ ವಿಧಾನಸಭೆಗೆ ವಿಶೇಷ ಸ್ಥಾನಮಾನ ಇದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ನಡೆಯುವ ಕಲಾಪಗಳನ್ನು ನೋಡಿದ್ದೇವೆ. ನಮ್ಮ ರಾಜ್ಯದಲ್ಲಿ ನಮ್ಮದೆ ಅದ ಘನತೆ, ಗೌರವ ಇಟ್ಟುಕೊಂಡು ಬಂದಿದ್ದೇವೆ. ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ಸರಕಾರವನ್ನು ಟೀಕಿಸೋಣ, ವೈಯಕ್ತಿಕ ಟೀಕೆಗಳು ಮಾಡದೆ ಇದ್ದರೆ ಒಳ್ಳೆಯದು. ನಮ್ಮನ್ನು ಜನ ಇಲ್ಲಿ ಕೂರಿಸಿರುವುದು ಟೀಕೆ ಮಾಡಲು. ಸರಕಾರ ಮಾಡುವ ತಪ್ಪುಗಳು, ಅವ್ಯವಹಾರಗಳನ್ನು ಹೇಳಲೇ ಬೇಕು. ಆದರೆ, ಆಡಳಿತ ಪಕ್ಷದವರು ಸಂಯಮ ಕಳೆದುಕೊಳ್ಳಬಾರದು’
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ







