ಹೈಕೋರ್ಟ್ ತೀರ್ಪಿನ ನಂತರ ‘ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ಬದ್ಧ’: ರಾಮಲಿಂಗಾರೆಡ್ಡಿ

ಬೆಂಗಳೂರು, ಆ.13: ಹೈಕೋರ್ಟ್ ತೀರ್ಪಿನ ನಂತರ, ನ್ಯಾಯಾಲಯದ ತೀರ್ಪಿಗೆ ಬದ್ದರಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018ರಂದು ಸರಕಾರದ ಮುಖ್ಯ ಕಾರ್ಯದರ್ಶಿಗಳು ನಡೆಸಿದ ಸಭೆಯ ತೀರ್ಮಾನದಂತೆ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೊಳಿಸುವ ಕುರಿತಾಗಿ ಸಾಧಕ-ಬಾಧಕಗಳನ್ನು ಪರಿಶೀಲಸಲು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು 2019ರಂದು ಸಲ್ಲಿಸಿದ ವರದಿಯಲ್ಲಿ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೊಳಿಸುವುದು ಕಾರ್ಯಸಾಧುವಲ್ಲ ಎಂಬುದಾಗಿ ತಿಳಿಸಿತ್ತು ಎಂದರು.
2021ರಲ್ಲಿ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಸರಕಾರ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯು ಬ್ಯಾಟರಿ ಚಾಲಿತ ವಿದ್ಯುತ್ ಮೋಟಾರು ಸೈಕಲ್ ಅಥವಾ ವಿದ್ಯುತ್ ಬೈಕ್‍ಗಳಿಗೆ ಮಾತ್ರ ಅನ್ವಯವಾಗತಕ್ಕದ್ದು ಎಂದು ಆದೇಶಿಸಿತ್ತು. ಆದರೆ ಪ್ರಸ್ತುತ ಕೆಲವು ಖಾಸಗಿ ಆಫ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಪೆಟ್ರೋಲ್ ದ್ವಿ-ಚಕ್ರ ವಾಹನಗಳನ್ನು ಉಪಯೋಗಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ ಇದು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಸರಕಾರ ರದ್ದುಗೊಳಿಸಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಓಲಾ, ಉಬರ್, ರಾಪಿಡೋ ಕಂಪೆನಿಗಳು ರಾಜ್ಯದಲ್ಲಿ ಬೈಕ್, ಟ್ಯಾಕ್ಸಿ ಸೇವೆಯನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಂದೆ ರಿಟ್ ಅರ್ಜಿಗಳನ್ವಯ ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳನ್ನು ನ್ಯಾಯಾಲಯವು ವಜಾಗೊಳಿಸಿದೆ. ಆದರೆ, ಊಬರ್, ಎಎನ್‍ಐ, ರೂಪೇನ್ ಮತ್ತು ಬೈಕ್ ಟ್ಯಾಕ್ಸಿ ವೆಲ್ಪೇರ್ ಅಸೋಸಿಯೇಷನ್‍ಗಳು ಹೈಕೋರ್ಟ್ ದ್ವಿ ಸದಸ್ಯ ಪೀಠದ ಮುಂದೆ ಸರಕಾರದ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ. ಈ ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಮುಗಿದ ನಂತರ ನ್ಯಾಯಾಲಯವು ಹೊರಡಿಸುವ ಆದೇಶದ ತೀರ್ಪಿಗೆ ಬದ್ಧರಾಗಿ ಕ್ರಮ ವಹಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.







