ದೇಶದ ಅಭಿವೃದ್ಧಿಗಾಗಿ ಶೈಕ್ಷಣಿಕವಾಗಿ ಸದೃಢರಾಗಬೇಕು : ಯು.ನಿಸಾರ್ ಅಹ್ಮದ್

ಬೆಂಗಳೂರು, ಆ.15 : ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಸೃದೃಢರಾಗಬೇಕು. ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಹಕ್ಕುಗಳ ಪರಿಜ್ಞಾನ ಉಂಟಾಗುತ್ತದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ತಿಳಿಸಿದರು.
ಶುಕ್ರವಾರ ಶೇಷಾದ್ರಿಪುರಂನಲ್ಲಿರುವ ಕೆಎಂಡಿಸಿ ಭವನದಲ್ಲಿ 79ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಆಯೋಗದ ಕಾರ್ಯದರ್ಶಿ ಡಾ.ಮಾಜುದ್ದೀನ್ ಖಾನ್ ಮಾತನಾಡಿ, ಭಾರತವು ವಿಕಸಿತ ಭಾರತವಾಗಿ ಅಭಿವೃದ್ಧಿಯಾಗುವ ನಿಟ್ಟಿಯಲ್ಲಿ ನಮ್ಮೆಲ್ಲರ ವೈಯಕ್ತಿಕ ಕೊಡುಗೆ ಅತ್ಯಗತ್ಯ. ಕರ್ನಾಟಕವು ದೇಶದ ಅಭಿವೃದ್ಧಿಯಲ್ಲಿ ತನ್ನದೆಯಾದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದು, ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ರಾಜ್ಯ ಉರ್ದು ಅಕಾಡಮಿ ಅಧ್ಯಕ್ಷ ಮುಹಮ್ಮದ್ ಅಲಿ ಖಾಝಿ, ರಾಜ್ಯ ಕ್ರೈಸ್ತ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ.ಎಸ್.ಜಾಫೆಟ್ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ‘ವಿಕಸಿತ ಭಾರತ-ಅಭಿವೃದ್ಧಿ ಹೊಂದಿದ ಭಾರತ' 2047 ರಲ್ಲಿ ಸ್ವಾತಂತ್ರ್ಯದ 100ನೆ ವಾರ್ಷಿಕೋತ್ಸವದ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಧ್ಯೇಯದೊಂದಿಗೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಅಫ್ಝಲ್ ಪಾಷಾ, ಕೈಸ್ತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಥೋನಿ, ಆಯೋಗದ ಸದಸ್ಯರಾದ ಮುಹಮ್ಮದ್ ಇಸ್ಮಾಯಿಲ್, ಕೆ.ಆರ್.ಜೋಬಿ, ವಾಂಗ್ಡೂಸ್ ಜ್ಯೋತಿ, ಉರ್ದು ಅಕಾಡಮಿಯ ಸದಸ್ಯರಾದ ಡಾ.ಅಖ್ತರ್ ಸೈಯಿದಾ ಖಾನಂ, ಡಾ.ಶಾಯಿಸ್ತಾ ಯೂಸೂಫ್ ಮತ್ತು ರಾಜ್ಯ ಅಲ್ಪಸಂಖ್ಯಾತರ ಆಯೋಗ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಉರ್ದು ಅಕಾಡಮಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.







