‘ಮತಗಳ್ಳತನ’ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಲಿ : ಮನ್ಸೂರ್ ಅಲಿ ಖಾನ್

ಬೆಂಗಳೂರು, ಆ.16 : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿರುವ ಮತಗಳ್ಳತನದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಕ್ಷ್ಯಾಧಾರಗಳನ್ನು ದೇಶದ ಮುಂದೆ ಇಟ್ಟಿದ್ದಾರೆ. ಈ ಕುರಿತು ಭಾರತೀಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಆಗ್ರಹಿಸಿದರು.
ಶನಿವಾರ ಶಿವಾಜಿನಗರದಲ್ಲಿರುವ ಅಲ್ ಅಮೀನ್ ಕನ್ನಡ ಪ್ರಾಥಮಿಕ ಶಾಲೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಯಾವ ರೀತಿ ನಡೆಸಲಾಗಿದೆ ಎಂದು ಬಹಿರಂಗವಾಗಿದೆ ಎಂದು ಹೇಳಿದರು.
ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಮತಗಳ್ಳತನ ಕೇವಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಮಸ್ಯೆಯಲ್ಲ, ಇದು ಇಡೀ ದೇಶದ ವಿಷಯವಾಗಿದೆ. ರಾಹುಲ್ ಗಾಂಧಿಯವರು ದೇಶ ಹಾಗೂ ಚುನಾವಣಾ ಆಯೋಗದ ಮುಂದೆ ಈ ಸಂಬಂಧ ಪ್ರಶ್ನೆಯನ್ನು ಇರಿಸಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ತಿಳಿಸಿದರು.
ನಮ್ಮ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದೆ. ಇವತ್ತು ಆ ಹಕ್ಕನ್ನು ಮತಗಳ್ಳತನ ಮೂಲಕ ಕಸಿಯಲಾಗುತ್ತಿದೆ. 9 ದಿನ ಆದರೂ ಚುನಾವಣಾ ಆಯೋಗವು ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಮತದಾರರ ಪಟ್ಟಿಯಲ್ಲಿ ಇಷ್ಟೊಂದು ಅಕ್ರಮ ನಡೆದಿದೆ ಅಂದರೆ, ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸ ಉಳಿಯಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮತಗಳ್ಳತನ ಆಗಿರುವ ಬಗ್ಗೆ ನಾವು ಗಮನ ಸೆಳೆದಿದ್ದೇವೆ. ಚುನಾವಣಾ ಆಯೋಗ ಮೌನವಹಿಸದೆ ಈ ಬಗ್ಗೆ ಸ್ಪಷ್ಟನೆ ನೀಡಲಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಏನು ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದರು.







