ಚುನಾವಣಾ ಆಯೋಗದ ಉತ್ತರದಾಯಿತ್ವ ಪ್ರಶ್ನಾರ್ಹ : ತೀಸ್ತಾ ಸೆಟಲ್ವಾದ್

ಬೆಂಗಳೂರು, ಆ.16 : ಮಹಾರಾಷ್ಟ್ರ ವಿಧಾನಸಭೆಗೆ 2024ರ ನವೆಂಬರ್‌ನಲ್ಲಿ ನಡೆದ ಚುನಾವಣೆಯ ಫಲಿತಾಂಶವು ಭಾರತೀಯ ಚುನಾವಣಾ ಆಯೋಗದ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನೆ ಪ್ರಶ್ನಿಸುವಂತಾಗಿದೆ ಎಂದು ವೋಟ್ ಫಾರ್ ಡೆಮಾಕ್ರಸಿಯ ಸಹ ಸಂಚಾಲಕಿ ತೀಸ್ತಾ ಸೆಟಲ್ವಾದ್ ತಿಳಿಸಿದರು.
ಶನಿವಾರ ನಗರದ ಶಾಸಕರ ಭವನದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ವತಿಯಿಂದ ‘ಚುನಾವಣಾ ಆಯೋಗದ ಆಯುಧೀಕರಣ’ ವೋಟ್ ಫಾರ್ ಡೆಮಾಕ್ರಸಿ(ವಿಎಫ್‍ಡಿ) ಸಂಸ್ಥೆಯ ಸದಸ್ಯರೊಂದಿಗೆ ಆಂಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಚುನಾವಣೆಯ ಬಳಿಕ ಮಹಾರಾಷ್ಟ್ರದ ಎಲ್ಲ 288 ವಿಧಾನಸಭಾ ಕ್ಷೇತ್ರಗಳ ಕುರಿತು ನಮ್ಮ ಚುನಾವಣಾ ತಜ್ಞರಾದ ಎಂ.ಜಿ.ದೇವಸಹಾಮ್, ಡಾ.ಪ್ಯಾರಾಲಾಲ್ ಗರ್ಗ್, ಮಾಧವ್ ದೇಶ್‍ಪಾಂಡೆ ಹಾಗೂ ಪ್ರೊ.ಹರೀಶ್ ಕಾರ್ಣಿಕ್ ಗಮನಿಸಿದ ವಿಶ್ಲೇಷಣೆಗಳು ಗಂಭೀರ ವೈಪರೀತ್ಯಗಳನ್ನು ಒಳಗೊಂಡಿರುವುದು ಬಯಲು ಮಾಡಿದವು ಎಂದು ಅವರು ಹೇಳಿದರು.
ಸಂಜೆ 5 ಗಂಟೆಯವರೆಗೆ ಶೇ.58.22ರಷ್ಟು ಇದ್ದ ಮತದಾನದ ಪ್ರಮಾಣವು ಮಧ್ಯರಾತ್ರಿ ವೇಳೆಗೆ ಶೇ.66.05ಕ್ಕೆ ಹೆಚ್ಚಳವಾಯಿತು. ಅದರಲ್ಲೂ ನಾಂದೇಡ್‍ನಲ್ಲಿ ಶೇ.13.57, ಜಲಗಾಂವ್‍ನಲ್ಲಿ ಶೇ.11.11, ಹಿಂಗೋಲಿಯಲ್ಲಿ ಶೇ.11.06, ಬೀಡ್‍ನಲ್ಲಿ ಶೇ.10.56 ಹಾಗೂ ಧುಲೆಯಲ್ಲಿ ಶೇ.10.46ರಷ್ಟು ಮತದಾನ ಹೆಚ್ಚಳವಾಯಿತು ಎಂದು ಅವರು ಹೇಳಿದರು.
ಬಿಜೆಪಿ 25 ಕ್ಷೇತ್ರಗಳಲ್ಲಿ 3 ಸಾವಿರ, 39 ಕ್ಷೇತ್ರಗಳಲ್ಲಿ 5 ಸಾವಿರ, 69 ಕ್ಷೇತ್ರಗಳಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಒಟ್ಟಾರೆ ಚುನಾವಣಾ ಫಲಿತಾಂಶದ ದಿಕ್ಕನ್ನು ಬದಲಿಸುವಂತಾಯಿತು. 2024ರ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ಹಾಗೂ ನವೆಂಬರ್‍ನಲ್ಲಿ ನಡೆದ ವಿಧಾನಸಭಾ ಚುನಾವಣೆ ನಡುವೆ(6 ತಿಂಗಳಲ್ಲಿ) ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆ 46 ಲಕ್ಷ ಹೆಚ್ಚಾಗಿದೆ ಎಂದು ತೀಸ್ತಾ ಸೆಟಲ್ವಾದ್ ತಿಳಿಸಿದರು.
ಅಷ್ಟೇ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿದ್ದ 85 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 12 ಸಾವಿರ ಮತಗಟ್ಟೆಗಳನ್ನು ಹೆಚ್ಚಳ ಮಾಡಲಾಗಿದೆ. ಕೆಲವು ಮತಗಟ್ಟೆಗಳಲ್ಲಿ ಸಂಜೆ 5 ಗಂಟೆ ನಂತರ ಹೊಸದಾಗಿ 600ಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದಾರೆ. ಕೆಲವೆಡೆ 10 ಗಂಟೆ ಹೆಚ್ಚುವರಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.
2024ರ ಆ.30ರಂದು ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ 9,64,85,765 ಮತದಾರರಿದ್ದಾರೆ ಎಂದು ತಿಳಿಸಿದೆ. ಆದರೆ, ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಅದೇ ದಿನ 9,53,74,302 ಮತದಾರರಿದ್ದಾರೆ. ಇವರ ಅಂಕಿ ಸಂಖ್ಯೆಯಲ್ಲಿ 11 ಲಕ್ಷ ಮತದಾರರ ವ್ಯತ್ಯಾಸ ಕಂಡು ಬಂದಿದೆ. ಆನಂತರ, ಅ.15ರಂದು 9,63,69,410 ಮತದಾರರು ಇರುವುದಾಗಿ ತಿಳಿಸಲಾಗುತ್ತದೆ. 15 ದಿನಗಳಲ್ಲಿ ಈ ಸಂಖ್ಯೆ 9,70,25,119ಕ್ಕೆ ಹೆಚ್ಚಳ(ಸುಮಾರು 16 ಲಕ್ಷ)ವಾಗುತ್ತದೆ ಎಂದು ತೀಸ್ತಾ ಸೆಟಲ್ವಾದ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ 9,30,61,760 ಮತಗಳು ಚಲಾವಣೆಯಾದರೆ, ವಿಧಾನಸಭಾ ಚುನಾವಣೆಯಲ್ಲಿ 9,70,25,119 ಮತಗಳು ದಾಖಲಾಗಿವೆ. ಆರೇ ತಿಂಗಳಲ್ಲಿ 39,53,259 ಮತಗಳು ಹೆಚ್ಚಳವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿಧಾನಸಭಾ ಕ್ಷೇತ್ರವಾರು ಸರಾಸರಿ 88,713 ಮತಗಳು ಲಭಿಸಿದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 1,16,064 ಮತಗಳು ಸರಾಸರಿ ಪ್ರತಿ ಕ್ಷೇತ್ರದಲ್ಲಿ ಪಡೆದಿದೆ ಎಂದು ಅವರು ಗಮನ ಸೆಳೆದರು.
ನಾಂದೇಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ, ಆ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿತು. ಚುನಾವಣೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನಾಗರಿಕ ಸಮಾಜ ಏನೆ ಪ್ರಶ್ನೆಗಳನ್ನು ಕೇಳಿದರೂ ಚುನಾವಣಾ ಆಯೋಗ ಮೌನ ವಹಿಸಿರುವುದು ಏಕೆ ಎಂದು ತೀಸ್ತಾ ಸೆಟಲ್ವಾದ್ ಪ್ರಶ್ನಿಸಿದರು.
ನಾಗರಿಕ ಸಮಾಜವಾಗಿ ನಾವು 2017ರ ನಂತರ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ ಕುರಿತು ಧ್ವನಿ ಎತ್ತುತ್ತಲೆ ಬಂದಿದ್ದೇವೆ. ಈಗಲಾದರೂ ದೇಶದ ರಾಜಕೀಯ ವಿರೋಧ ಪಕ್ಷ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ಸಂವಾದದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಮಾತನಾಡಿದರು, ಒಬಮಾ ಆಡಳಿತದ ಸಲಹೆಗಾರ ಮಾಧವ್ ದೇಶ್‍ಪಾಂಡೆ ಚುನಾವಣೆಯ ವ್ಯವಸ್ಥೆ, ಮತದಾನದ ಪ್ರಕ್ರಿಯೆ, ಮತಗಳ ಎಣಿಕೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಪ್ರಾತ್ಯಕ್ಷಿತೆ ನೀಡಿದರು.
ವಿಎಫ್‍ಡಿ ಬೇಡಿಕೆಗಳು:
•ಮತದಾನ ವ್ಯವಸ್ಥೆಯ ವಿಕೇಂದ್ರೀಕರಣ: ಭಾರತೀಯ ಚುನಾವಣಾ ಆಯೋಗವು ಕೇವಲ ಲೋಕಸಭಾ, ರಾಜ್ಯಸಭಾ ಹಾಗೂ ರಾಷ್ಟ್ರಪತಿಯ ಚುನಾವಣೆಯನ್ನು ನಡೆಸಬೇಕು. ರಾಜ್ಯ ಚುನಾವಣಾ ಆಯೋಗಗಳು ವಿಧಾನಸಭೆ, ಪಂಚಾಯಿತಿ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನು ನಡೆಸಬೇಕು.
•ತಕ್ಷಣ ಇವಿಎಂ, ವಿವಿಪ್ಯಾಟ್ ಹಾಗೂ ಮತದಾರರ ಪಟ್ಟಿಯ ಪರಿಶೋಧನೆ ಮಾಡಬೇಕು.
•ಮಶೀನ್ ರೀಡಬಲ್ ರೋಲ್ಸ್, ಅರ್ಜಿ ಸಂಖ್ಯೆ 17ಎ/17ಸಿ ಹಾಗೂ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು.
•ಮತದಾನದ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಾಗದಿರುವಂತೆ ನಿಯಮ 93ಕ್ಕೆ ತಂದಿರುವ ತಿದ್ದುಪಡಿಯನ್ನು ಕೂಡಲೆ ಹಿಂಪಡೆದು, ಪಾರದರ್ಶಕತೆ ಜಾರಿಗೆ ತರಬೇಕು.
•ಮತದಾನದ ಪರಿಶೀಲನೆಗೆ ಕಾನೂನಿನ ರಕ್ಷಣೆ ಒದಗಿಸಬೇಕು.







