ಬೆಂಗಳೂರು | ರಸ್ತೆ ಅಪಘಾತ : ಡೆಲಿವರಿ ಬಾಯ್ ಮೃತ್ಯು

ಬೆಂಗಳೂರು, ಆ.17 : ನಗರದ ಪೀಣ್ಯ ಮೇಲ್ಸೇತುವೆ ಬಳಿ ರಸ್ತೆ ಅಪಘಾತ ಸಂಭವಿಸಿ ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ಶಶಿಕುಮಾರ್(26) ಮೃತಪಟ್ಟ ಯುವಕ. ಈತ ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ನಗರದ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದರು.
ಆ.17ರ ರವಿವಾರ ಮುಂಜಾನೆ 6.30ರ ವೇಳೆಗೆ ಕೆಲಸದ ನಿಮಿತ್ತ ಮಾದನಾಯಕನಹಳ್ಳಿಯಿಂದ ಮೆಜಸ್ಟಿಕ್‍ಗೆ ಹೋಗುವ ಸಂದರ್ಭದಲ್ಲಿ ನಾಗಸಂದ್ರ ಮೆಟ್ರೋ ನಿಲ್ದಾಣದ ಸಮೀಪ ಪೀಣ್ಯ ಮೇಲ್ಸೇತುವೆ ಮೇಲೆ ಬರುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ವಾಹನವೊಂದು ಢಿಕ್ಕಿ ಹೊಡೆದಿದೆ. ಈ ಪರಿಣಾಮ ತೀವ್ರವಾಗಿ ಗಾಯಗೊಂಡ ಶಶಿಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತವೆಸಗಿದ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ವಿಷಯ ತಿಳಿದ ಕೂಡಲೇ ಪೀಣ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
Next Story





