ಬೆಂಗಳೂರು | ಪ್ರೀತಿ ವಿಚಾರಕ್ಕೆ ಯುವಕನಿಗೆ ಚಾಕು ಇರಿತ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ.17: ಯುವತಿಯನ್ನು ಪ್ರೀತಿಸುವ ವಿಚಾರಕ್ಕೆ ಓರ್ವ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಯತೀಶ್ ಎಂಬಾತ ಚಾಕು ಇರಿದ ಆರೋಪಿ ಎಂದು ಗುರುತಿಸಲಾಗಿದೆ. ಚಂದನ್ ಚಾಕು ಇರಿತದಿಂದ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಚಂದನ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದು, ಯುವತಿ ಕೂಡ ಚಂದನ್ನನ್ನು ಪ್ರೀತಿಸುತ್ತಿದ್ದಾರೆ. ಇದೇ ಯುವತಿಯು ಚಂದನ್ಗಿಂತ ಮೊದಲು ಆರೋಪಿ ಯತೀಶ್ನನ್ನು ಪ್ರೀತಿಸುತ್ತಿದ್ದಳು. ಯತೀಶ್ನೊಂದಿಗೆ ಪ್ರೀತಿ ಮುರಿದು ಬಿದ್ದಿದ್ದು, ಆ ನಂತರ ಚಂದನ್ನನ್ನು ಪ್ರೀತಿಸುತ್ತಿದ್ದಾರೆ. ಈ ವಿಚಾರ ಯುವತಿಯ ಮಾಜಿ ಪ್ರಿಯಕರ ಯತೀಶ್ಗೆ ಗೊತ್ತಾಗಿದೆ. ಆಗ ಆರೋಪಿ ಯತೀಶ್ ಹಾಗೂ ಆತನ ಸಹಚರರು, ಚಂದನ್ನನ್ನು ಮಾತನಾಡಲು ಕರೆಸಿಕೊಂಡು ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ತೆರಳಿದ ಚಂದನ್ ಸ್ನೇಹಿತರು, ಆತನನ್ನು ರಕ್ಷಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ಚಂದನ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.





