ಬೆಂಗಳೂರು | ಮನೆಗಳ್ಳತನ: ಓರ್ವ ಮಹಿಳೆ ಸಹಿತ ಆರು ಮಂದಿ ಬಂಧನ

ಬೆಂಗಳೂರು, ಆ.17: ಮನೆಯೊಂದಕ್ಕೆ ನುಗ್ಗಿ ನಗದು ಸಹಿತ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಡಿ ಓರ್ವ ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಇಲ್ಲಿನ ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕವಿತಾ(33), ವೆಂಕಟೇಶ್(43), ಕೃಷ್ಣ ಯಾನೆ ಮೋರಿ ರಾಜ(52), ಹರೀಶ್(34), ನಾಗರಾಜ(29) ಹಾಗೂ ಪ್ರತಾಪ್(22) ಎಂಬುವರು ಬಂಧಿತ ಆರೋಪಿಗಳು ಗುರುತಿಸಲಾಗಿದೆ.
ಬಂಧಿತ ಮಹಿಳೆಯು ಮನೆಗಳ್ಳನತದ ಪ್ರಮುಖ ಆರೋಪಿ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು, ಬಂಧಿತರು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಗಿರವಿ ಇಟ್ಟಿದ್ದ 9.90 ಲಕ್ಷ ರೂ. ಮೌಲ್ಯದ 99 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬಂಧಿತರ ಮೇಲೆ ನಗರದ ವಿವಿಧ ಠಾಣೆಗಳಲ್ಲಿಯೂ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 12ರಂದು ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ದಾಸರಹಳ್ಳಿಯ ಮಲ್ಲಸಂದ್ರ ಪೈಪ್‍ಲೈನ್ ರಸ್ತೆಯಲ್ಲಿ ವಾಸವಿದ್ದ ಮಂಗಳ ಎಂಬುವವರ ಮನೆಯೊಳಗೆ ಆರೋಪಿಗಳು ನುಗ್ಗಿ ಲಾಕರ್‍ನಲ್ಲಿಟ್ಟಿದ್ದ 19 ಗ್ರಾಂ ಚಿನ್ನಾಭರಣ ಮತ್ತು 1.56ಲಕ್ಷ ರೂ.ನಗದು ಹಾಗೂ ಕೆಲ ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಮನೆಯೊಡತಿ ದೂರು ದಾಖಲಿಸಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಿ, ತನಿಖೆ ನಡೆಸಿದ ಬಾಗಲಗುಂಟೆ ಠಾಣಾ ಪೊಲೀಸರು, ಸದ್ಯ ಆರು ಮಂದಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿರುವುದಾಗಿ ಮಾಹಿತಿ ನೀಡಿದ್ದಾರೆ.







