ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ : ವಕೀಲ ಕೆ.ಎನ್.ಜಗದೀಶ್ ವಿರುದ್ಧ ದೂರು ದಾಖಲು

ಕೆ.ಎನ್.ಜಗದೀಶ್
ಬೆಂಗಳೂರು, ಆ.19: ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ವಕೀಲ ಕೆ.ಎನ್.ಜಗದೀಶ್ ಮೇಲೆ ಬಿಜೆಪಿ ಮುಖಂಡರು ಇಲ್ಲಿನ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಬಗ್ಗೆ ವಕೀಲ ಕೆ.ಎನ್.ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ, ಅವಹೇಳನಕಾರಿ ಭಾಷೆಯಲ್ಲಿ ಮಾತನಾಡುವ ಮೂಲಕ ಶಾಸಕರ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿರುವುದಾಗಿ ಗೊತ್ತಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಬಿಜೆಪಿ ಮುಖಂಡ ವಸಂತ್ ಅರಕೆರೆ ಮಾತನಾಡಿ, ಸಂವಿಧಾನ ಎಲ್ಲರಿಗೂ ಪ್ರಶ್ನಿಸುವ ಹಕ್ಕನ್ನು ನೀಡಿದೆ. ಆದರೆ, ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ಸೇರಿದಂತೆ ಸಿಕ್ಕ ಸಿಕ್ಕವರ ಬಗ್ಗೆ ಅವಾಚ್ಯ ಪದಪ್ರಯೋಗ, ಅವಹೇಳನಕಾರಿ ಮತ್ತು ಅಗೌರವಯುತ ಭಾಷೆಯಲ್ಲಿ ಮಾತನಾಡುವುದು ಸಂವಿಧಾನದ ಯಾವ ಪುಟದಲ್ಲಿದೆ ಎಂಬುದನ್ನು ವಕೀಲ ಜಗದೀಶ್ ಅವರು ತೋರಿಸಲಿ ಎಂದು ಕಿಡಿಕಾರಿದರು.
ಯಾವುದೇ ಒಬ್ಬ ವ್ಯಕ್ತಿ ದಿಢೀರನೆ ನಾಯಕನಾಗಿ ಅಥವಾ ಗಣ್ಯ ವ್ಯಕ್ತಿಯಾಗಿ ಬೆಳೆದು ಬಿಡುವುದಿಲ್ಲ. ಅದರ ಹಿಂದೆ ಅವರ ಹೋರಾಟ, ಪರಿಶ್ರಮ ಇರುತ್ತದೆ. ಅಂಥವರ ಬಗ್ಗೆ ಅವಾಚ್ಯವಾಗಿ, ಅಗೌರವಯುತವಾಗಿ ಮಾತನಾಡುವುದು, ಜಾತಿಯ ಹೆಸರಿಡಿದು ನಿಂದಿಸುವುದು ಅಸಂವಿಧಾನಿಕವಾದ ಕ್ರಮವಾಗಿದೆ ಎಂದು ವಸಂತ್ ಅರಕೆರೆ ಟೀಕಿಸಿದರು.







