ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆ ಬಗ್ಗೆ ಸಿಎಂ ಜೊತೆ ಚರ್ಚೆ: ಶಿವರಾಜ ತಂಗಡಗಿ

ಬೆಂಗಳೂರು, ಆ.19 : ಬೆಳಗಾವಿಯ ಸುವರ್ಣಸೌಧದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಸರ್ಕಾರದ/ ಸಾರ್ವಜನಿಕ ಜಾಗದಲ್ಲಿ ಯಾವುದೇ ಸಂತರ/ಶರಣರ, ಜನ ನಾಯಕರ ಸೇರಿದಂತೆ ಇತರೆ ಯಾವುದೇ ಗಣ್ಯ ವ್ಯಕ್ತಿಗಳ ಪ್ರತಿಮೆಯನ್ನು ಸ್ಥಾಪನೆಗೆ ಅವಕಾಶವಿಲ್ಲ. ಅಂಬಿಗರ ಚೌಡಯ್ಯ ಪ್ರತಿಮೆಯನ್ನು ವಿಧಾನಸೌಧದ ಬಳಿ ಮಾಡಲು ಸಾಧ್ಯವಿಲ್ಲ ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ಬೆಂಗಳೂರಿನ ಚಾಲುಕ್ಯ ವೃತ್ತದರಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯ ಪಕ್ಕದಲ್ಲಿರುವ ಜವಾಹರಲಾಲ್ ನೆಹರೂ ಪ್ಲಾನಿಟೋರಿಯಂಗೆ ಹೊಂದಿಕೊಂಡಿರುವ ಜಾಗದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯ ಇದೆ. ಆದರೆ ಪ್ಲಾನಿಟೋರಿಯಂ ಪಕ್ಕವೂ ಪ್ರತಿಮೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿದ್ದೇನೆ. ಆದರೆ ಬೆಂಗಳೂರಿನಲ್ಲಿ ಜಾಗ ಸಿಗುತ್ತಿಲ್ಲ. ಹೀಗಾಗಿ ಚೌಡಯ್ಯ ಅವರ ಹುಟ್ಟೂರಿನಲ್ಲಿ ದೊಡ್ಡ ಪ್ರತಿಮೆ ಮಾಡಲು ಸಿದ್ಧರಿದ್ದೇವೆ ಅಥವಾ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿಮೆಯಾಗಬೇಕು. ಚೌಡಯ್ಯ ಅವರ ಹುಟ್ಟೂರಿನಲ್ಲಿ ನಾನೇ ಪ್ರತಿಮೆ ಮಾಡಬಹುದು. ನಮ್ಮ ಸಮುದಾಯವು ಕಾಂಗ್ರೆಸ್ ಕೈ ಹಿಡಿದಿದೆ. ಹೀಗಾಗಿ ವಿಧಾನಸೌಧ ಅಥವಾ ಬೆಳಗಾವಿ ಸುವರ್ಣಸೌಧದಲ್ಲಾದರೂ ಪ್ರತಿಮೆ ಮಾಡಬೇಕು ಎಂದು ಒತ್ತಾಯಿಸಿದರು.







