ಬಿಜೆಪಿ ಸಭಾತ್ಯಾಗ ನಡುವೆ ಕೆರೆ ಸಂರಕ್ಷಣೆ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು, ಆ.19: ಕೆರೆಗಳ ಸಂರಕ್ಷಣೆ ಹಿನ್ನೆಲೆ 2025ನೆ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕವನ್ನು ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ಗೈರಿನ ನಡುವೆ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಮಂಗಳವಾರ ಶಾಸನ ರಚನಾ ಕಲಾಪದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ವಿಧೇಯಕ ಮಂಡಿಸಿದರು. ಆನಂತರ, ಈ ತಿದ್ದುಪಡಿ ವಿಧೇಯಕ ಕುರಿತು ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ವಿಸ್ತೃತ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ತಿದ್ದುಪಡಿ ವಿಧೇಯಕ ಬೆಂಗಳೂರಿಗೆ ಮಾರಕವಾಗಿದೆ ಎಂದ ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್, ಈ ತಿದ್ದುಪಡಿಯನ್ನು ಸದನ ಸಮಿತಿ ರಚನೆ ಮಾಡಿ ಅದರ ಅವಗಾಹನೆಗೆ ನೀಡಬೇಕು. ಆದರೆ, ಸರಕಾರ ಈ ಮನವಿಯನ್ನು ಪುರಸ್ಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡುವುದಾಗಿ ಹೇಳಿದರು. ಬಳಿಕ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದರು.
ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಸ್ಪೀಕರ್ ಯು.ಟಿ.ಖಾದರ್ ಅವರು, ಧ್ವನಿಮತದ ಮೂಲಕ ಈ ವಿಧೇಯಕ ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ಇದಕ್ಕೂ ಮೊದಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕೆರೆಗಳ ಬಫರ್ ಜೋನ್ ವಿಚಾರವಾಗಿ ತಿದ್ದುಪಡಿ ತನ್ನಿ ಎಂದು ಯಾವುದೇ ಬಿಲ್ಡರ್‍ಗಳು ಬಂದು ಸರಕಾರದ ಬಳಿ ಮನವಿ ಮಾಡಿಲ್ಲ. ಈ ಹಿಂದೆ ಕಂಠೀರವ ಸ್ಟೇಡಿಯಂ, ಕೆಂಪೇಗೌಡ ಬಸ್ ನಿಲ್ದಾಣವನ್ನು ಕೆರೆಗಳ ಮೇಲೆ ನಿರ್ಮಾಣ ಮಾಡಲಾಯಿತು. ಅದು ಆಗಿನ ಕಾಲ ಈಗ ಯಾವುದೇ ಕಾರಣಕ್ಕೆ ಕೆರೆಗಳನ್ನು ಒತ್ತುವರಿ ಮಾಡುವುದಿಲ್ಲ. ನಾವು ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಈ ತಿದ್ದುಪಡಿಗೆ ಮುಂದಾಗಿದ್ದೇವೆ ಎಂದು ಹೇಳಿದರು.
ನಮಗೆ ಎನ್ ಜಿಟಿಯ ತೀರ್ಪುಗಳ ಬಗ್ಗೆಯೂ ಅರಿವಿದೆ. ನಾವು ಸುಪ್ರೀಂ ಕೋರ್ಟಿನ ತೀರ್ಪುಗಳ ವಿರುದ್ಧ ಹೋಗುತ್ತಿಲ್ಲ. ಬೆಂಗಳೂರಿನ ರಾಜಕಾಲುವೆಗಳ ಬಫರ್ ಜೋನ್ ಗಳಲ್ಲಿ ಕಟ್ಟಡ ಹಾಗೂ ಇತರೇ ನಿರ್ಮಾಣ ಕೆಲಸಗಳು ಆಗುತ್ತವೆ ಎನ್ನುವ ಮುನ್ನೆಚರಿಕೆ ವಹಿಸಿಕೊಂಡು ಸುಮಾರು 300 ಕಿಮೀ ಉದ್ದಕ್ಕೆ ರಾಜಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದೇವೆ. ಒಂದೊಂದು ಬದಿಯಲ್ಲೂ 50 ಮೀ. ನಂತೆ ಎರಡು ಬದಿ ಕಡ್ಡಾಯವಾಗಿ ರಸ್ತೆ ನಿರ್ಮಾಣ ಮಾಡಲೇಬೇಕು ಎಂದು ಹೊರಟಿದ್ದೇವೆ. ಇದಕ್ಕಾಗಿ 3 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಿದ್ದೇವೆ ಎಂದು ಅವರು ತಿಳಿಸಿದರು.







