ʼಒಳಮೀಸಲಾತಿʼ ಸರಕಾರಕ್ಕೆ ಎಡ ಯಾರು?, ಬಲ ಯಾರು? ಎಂಬ ಅರಿವಿಲ್ಲ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು, ಆ. 23: ‘ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆ ಗೊಂದಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸರಕಾರಕ್ಕೆ ಎಡ ಯಾರು?, ಬಲ ಯಾರು?, ಸ್ಪೃಶ್ಯರಲ್ಲಿ ಯಾವ್ಯಾವ ಜಾತಿಗಳು ಬರುತ್ತವೆ ಎಂಬ ಅರಿವು ಇದ್ದಂತೆ ಕಾಣುತ್ತಿಲ್ಲ’ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇಂದಿಲ್ಲಿ ಟೀಕಿಸಿದ್ದಾರೆ.
ಶನಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಲೆಮಾರಿ ಸಮುದಾಯ, ಸಣ್ಣಪುಟ್ಟ ಜಾತಿಗಳನ್ನು ಅವರ ಮೂಲಜಾತಿ ಗಮನಿಸಿ ಸೇರಿಸಬೇಕಿತ್ತು. ಅದನ್ನು ಸರಕಾರ ಮಾಡಿಲ್ಲ. ಕುಲಶಾಸ್ತ್ರ ಅಧ್ಯಯನ ಮಾಡಿದ್ದರೆ ಯಾರ್ಯಾರು ಯಾವ ಮೂಲಜಾತಿ ಎಂದು ಸರಕಾರಕ್ಕೆ ಮಾಹಿತಿ ಸಿಗುತ್ತಿತ್ತು ಎಂದರು.
ಗೌಪ್ಯತೆಯ ಕೊರತೆ: ಒಳಮೀಸಲಾತಿ ವಿಷಯದಲ್ಲಿ ಸದನ ನಡೆಯುವ ವೇಳೆ ಯಾವುದೇ ಪ್ರಮುಖ ವಿಷಯಗಳನ್ನು ಹೊರಗೆ ಚರ್ಚೆ ಮಾಡುವಂತಿಲ್ಲ. ಸಂಪುಟದ ವಿಶೇಷ ಸಭೆ ಕರೆದು ಅಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, ಹಿಂದಿನ ದಿನವೇ ಎಲ್ಲವೂ ಬಹಿರಂಗವಾಗಿತ್ತು. ಇವರಲ್ಲಿ ಗೌಪ್ಯತೆಯ ಕೊರತೆಯೂ ಇದೆ ಎಂಬುದು ಬಹಿರಂಗವಾಗಿದೆ ಎಂದು ಅವರು ಟೀಕಿಸಿದರು.
ಬೇಕಾದಂತೆ ತೀರ್ಮಾನ: ಸರಕಾರವು ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಮಾಡಿದೆ. ಸದಾಶಿವ ಆಯೋಗ, ಮಾಧುಸ್ವಾಮಿ ವರದಿಯನ್ನು ಪರಿಗಣಿಸಿಲ್ಲ; ನ್ಯಾ.ನಾಗಮೋಹನ್‍ದಾಸ್ ಆಯೋಗದ ವರದಿಯನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ, ಎಲ್ಲವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬೇಕಾದಂತೆ ಒಂದು ತೀರ್ಮಾನ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬೀದಿಯಲ್ಲಿ ನಿಂತ ಅಲೆಮಾರಿಗಳು: ಪರಿಶಿಷ್ಟರಲ್ಲಿನ 59 ಜಾತಿಗಳು ಇಂದು ಬೀದಿಯಲ್ಲಿ ನಿಂತಿದ್ದಾರೆ. ಅವರೆಲ್ಲರೂ ಸಣ್ಣಪುಟ್ಟ ಜಾತಿಗಳು. ಅವರಿಗೆ ನಾಯಕತ್ವ ಇಲ್ಲ. ಎಡಗೈಗೆ-ಶೇ.6, ಬಲಗೈ ಸಮುದಾಯಕ್ಕೆ ಶೇ.6 ಹಾಗೂ ಭೋವಿ, ಲಮಾಣಿ, ಕೊರಚ ಮತ್ತು ಕೊರಮ ಸೇರಿದಂತೆ ಅಲೆಮಾರಿ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದನ್ನು ಸಾಮಾಜಿಕ ನ್ಯಾಯ ಎಂದರೆ ಅಂಬೇಡ್ಕರ್‌ಗೆ ಅವಮಾನ ಎಂದು ಟೀಕಿಸಿದರು.







