ಬೆಂಗಳೂರು | ಮದ್ಯಪಾನ ಸೇವನೆ ವೇಳೆ ಸ್ನೇಹಿತರ ನಡುವೆ ಜಗಳ : ಓರ್ವನ ಕೊಲೆ

ಬೆಂಗಳೂರು, ಆ.25: ಮದ್ಯಪಾನ ಸೇವನೆ ವೇಳೆ ಸ್ನೇಹಿತರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶ ಮೂಲದ ಅಮಿತ್(25) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ವಿ. ಕಾಂಕ್ರೇಟ್ ಪ್ಲ್ಯಾಂಟ್ ಬಳಿ ಆ.24ರ ರಾತ್ರಿ 7.30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಮಿತ್ ಮತ್ತು ಆತನ ಇಬ್ಬರು ಸ್ನೇಹಿತರ ನಡುವೆ ಮದ್ಯಪಾನ ಸೇವನೆ ವೇಳೆಯಲ್ಲಿ ಗಲಾಟೆ ನಡೆದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ಗಾಜಿನ ಚೂರಿನಿಂದ ಅಮಿತ್ ಕೈ ಹಾಗೂ ಇನ್ನಿತರ ದೇಹದ ಭಾಗಗಳಿಗೆ ಮನ ಬಂದಂತೆ ಕೊಯ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಘಟನಾ ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಅಮಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಅಮಿತ್ ಕೊಲೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





