ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಕೆ.ಎಸ್.ಮಧುಸೂದನ್

ಬೆಂಗಳೂರು, ಆ.25 : ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಇಲಾಖೆಯಿಂದ ಪ್ರದಾನ ಮಾಡಲಿರುವ ಈ ವರ್ಷದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಮೈಸೂರಿನ ಹಿನಕಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ವಿಜ್ಞಾನ ಶಿಕ್ಷಕ ಕೆ.ಎಸ್. ಮಧುಸೂದನ್ ಭಾಜನರಾಗಿದ್ದಾರೆ.
ಈ ವರ್ಷ 45 ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ, ಮಹಾರಾಷ್ಟ್ರದ ಮೂವರು, ಬಿಹಾರದ ಮೂವರು, ಮಧ್ಯಪ್ರದೇಶ, ಛತ್ತೀಸ್‍ಗಢ, ಗುಜರಾತ್, ಉತ್ತರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ, ಹರಿಯಾಣ, ಪುದುಚೇರಿ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಲಕ್ಷದ್ವೀಪ, ಜಾರ್ಖಂಡ್, ಅಸ್ಸಾಂ, ತ್ರಿಪುರ, ಮೇಘಾಲಯ, ಸಿಕ್ಕಿಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಗೋವಾ, ರಾಜಸ್ಥಾನ, ಚಂಡೀಗಢ, ಉತ್ತರಾಖಂಡ, ದಿಲ್ಲಿ, ಪಂಜಾಬ್, ಹಿಮಾಚಲ ಪ್ರದೇಶದ ತಲಾ ಓರ್ವ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರಿಗೆ ಪ್ರಮಾಣಪತ್ರ, 50 ಸಾವಿರ ರೂ.ನಗದು ಬಹುಮಾನ ಮತ್ತು ಬೆಳ್ಳಿ ಪದಕ ನೀಡಲಾಗುತ್ತದೆ. ಸೆ.5ರಂದು ಹೊಸದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧುಸೂದನ್ ಸೇರಿದಂತೆ ಒಟ್ಟು 45 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.







