ಗಣೇಶ ಚತುರ್ಥಿ | ನಿಯಮದಂತೆ ಧ್ವನಿವರ್ಧಕ, ಡಿ.ಜೆ. ಬಳಕೆಗೆ ಪೊಲೀಸ್ ಆಯುಕ್ತರ ಸೂಚನೆ

ಬೆಂಗಳೂರು, ಆ.25: ಗಣೇಶ ಚತುರ್ಥಿ ಹಿನ್ನೆಲೆ ಧ್ವನಿವರ್ಧಕ, ಡಿ.ಜೆ. ಬಳಕೆ ಮಾಡುವಾಗ ಕಾನೂನಾತ್ಮಕವಾಗಿ ಇರುವಂತಹ ನಿಯಮದ ಪ್ರಕಾರವಾಗಿಯೇ ನಡೆದುಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರು ಹಬ್ಬ ಆಚರಿಸುವ ಹೆಸರಿನಲ್ಲಿ ಬಲವಂತವಾಗಿ ಹಣ ವಸೂಲಿ ಮಾಡಬಾರದು, ಅಂಥಹ ಪ್ರಕರಣಗಳು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಹಬ್ಬದ ಸಂದರ್ಭದಲ್ಲಿ ಮೆರವಣಿಗೆಗಳು, ಸಂಚಾರ ಮಾರ್ಗಗಳ ಬದಲಾವಣೆಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಿದ್ದೇವೆ. ನಗರದ ಕೆಲವೆಡೆ ಕಾಮಗಾರಿ ಕೆಲಸಗಳು ನಡೆಯುತ್ತಿರುವುದರಿಂದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ಅಗತ್ಯತೆಯ ಬಗ್ಗೆಯೂ ಚರ್ಚಿಸಲಾಗಿದ್ದು, ಕೆಎಸ್‍ಆರ್‍ಪಿ, ಸಿಎಆರ್ ಪಡೆಗಳನ್ನು ನಿಯೋಜಿಸಲಿದ್ದೇವೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಸಭೆಯಲ್ಲಿ ಜಂಟಿ ಪೊಲೀಸ್ ಆಯುಕ್ತರು, ನಗರದ ಎಲ್ಲಾ ವಿಭಾಗಗಳ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಹಾಜರಿದ್ದರು.







