ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಜಗದೀಶ್ನ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ.26: ರೌಡಿಶೀಟರ್ ಶಿವಪ್ರಕಾಶ್ ಯಾನೆ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜಗದೀಶ್ನನ್ನು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆ.25ರ ರಾತ್ರಿ ದುಬೈನಿಂದ ಹೊಸದಿಲ್ಲಿಗೆ ಬಂದಿಳಿದ ಆರೋಪಿ ಜಗದೀಶ್ನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಈಗಾಗಲೇ ಇದುವರೆಗೂ ಕಿರಣ್, ಪ್ರದೀಪ್, ವಿಮಲ್, ಮದನ್, ಸ್ಯಾಮ್ಯುಯೆಲ್, ಅವಿನಾಶ್, ಅರುಣ್, ನವೀನ್, ಮುರುಗೇಶ್, ನರಸಿಂಹ, ಸುದರ್ಶನ್, ಶಿವು, ಪ್ರಸಾದ್, ಮನೋಜ್, ಫ್ಯಾಟ್ರಿಕ್ ಹಾಗೂ ಕಿರಣ್ ಎಂಬವರನ್ನು ಬಂಧಿಸಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಜಗದೀಶ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕಾರಣ ಬಂಧನ ಸಾಧ್ಯವಾಗಿರಲಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರು ಪ್ರಕರಣದ ಐದನೇ ಆರೋಪಿಯಾಗಿದ್ದಾರೆ.
ಇನ್ನು ದೇಶದ ಹಲವೆಡೆ ಆರೋಪಿ ಜಗದೀಶ್ ಪತ್ತೆಗೆ ತೀವ್ರ ಶೋಧ ನಡೆಸಿದ್ದ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು, ಆತನ ಇರುವಿಕೆ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಲುಕ್ ಔಟ್ ಸಕ್ಯೂರ್ಲರ್ (ಎಲ್ಓಸಿ) ಜಾರಿಗೊಳಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಯ ವಿಶೇಷ ತನಿಖಾ ತಂಡದ ಹೆಗಲಿಗೆ ವಹಿಸಲಾಗಿತ್ತು.
ಪ್ರಕರಣದ ಹಿನ್ನೆಲೆ: ಜುಲೈ 15ರಂದು ರಾತ್ರಿ ಹಲಸೂರಿನ ಮನೆಯ ಬಳಿಯೇ ಮಾರಕಾಸ್ತ್ರಗಳಿಂದ ಹೊಡೆದು ಶಿವಪ್ರಕಾಶ್ನನ್ನು ಹತ್ಯೆಗೈಯ್ಯಲಾಗಿತ್ತು. ಈ ಬಗ್ಗೆ ಶಿವಪ್ರಕಾಶ್ನ ತಾಯಿ ವಿಜಯಲಕ್ಷ್ಮೀ ಭಾರತೀನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.







