ಧ್ವನಿ ಇಲ್ಲದವರ ಧ್ವನಿ ಡಾ.ಪ್ರೊ.ರವಿವರ್ಮ ಕುಮಾರ್ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆ.28 : ಮಾಜಿ ಅಡ್ವೊಕೇಟ್ ಜನರಲ್ ಡಾ.ಪ್ರೊ.ರವಿವರ್ಮ ಕುಮಾರ್ ಅವರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ವಕೀಲಿ ವೃತಿಯನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಗಳೂರು ವಕೀಲರ ಸಂಘ ಮತ್ತು ರವಿವರ್ಮ ಕುಮಾರ್ ಅಸೋಸಿಯೇಟ್ ವತಿಯಿಂದ ‘ಡಾ.ಪ್ರೊ.ರವಿವರ್ಮ ಕುಮಾರ್ ವಕೀಲಿ ವೃತ್ತಿ ಆರಂಭಿಸಿ 50 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಸನ್ಮಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಬದಲಾವಣೆಯನ್ನು ತರಬೇಕು ಎಂಬ ಚಿಂತನೆ ರವಿವರ್ಮ ಕುಮಾರ್ ಅವರಲ್ಲಿ ಇದೆ. ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಸಮಾನತೆ ತರಬೇಕು ಎನ್ನುವ ಕಳಕಳಿ ಅವರಿಗೆ ಇದೆ. ಅವರು ಬಲಪಂಥೀಯ ವಿಚಾರಗಳಿಗೆ ವಿರೋಧಿಯಾಗಿದ್ದು, ಇವತ್ತಿಗೂ ಸೈದ್ಧಾಂತಿಕವಾಗಿ ಬದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು.
ರವಿವರ್ಮ ಕುಮಾರ್ ವಕೀಲಿ ವೃತಿಯನ್ನು ಆರಂಭಿಸಿ 50 ವರ್ಷಗಳನ್ನು ಪೂರೈಸಿದ್ದಾರೆ. ಅವರು ಒಳ್ಳೆಯ ವಕೀಲರಾಗಿದ್ದಾರೆ. ಸಾಮಾಜಿಕ ಸೇವೆ ಸೇರಿ ವಿವಿಧ ಕ್ಷೇತ್ರದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಿಂದ ಈ ದೇಶದ ಸ್ಥತಿಗತಿಗಳನ್ನು ಬದಲಾವಣೆ ಮಾಡಬಹುದಾಗಿದೆ. ಹೀಗಾಗಿ ವಕೀಲಿ ವೃತ್ತಿ ಉನ್ನತವಾದದ್ದು, ಅದು ಪ್ರಮಾಣಿಕವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ , ಮತ್ತಿತರರು ಇದ್ದರು.
:::::::::::::







