ರಸ್ತೆ ಮೇಲ್ಸೇತುವೆ/ ಕೆಳಸೇತುವೆ ಕಾಮಗಾರಿಗಳ ತ್ವರಿತವಾಗಿ ಪೂರ್ಣಗೊಳಿಸಲು ವಿ.ಸೋಮಣ್ಣ ಸೂಚನೆ

ಬೆಂಗಳೂರು, ಆ.29: ಬೆಂಗಳೂರಿನ ವಿವಿಧ ರಸ್ತೆ ಮೇಲ್ಸೇತುವೆ(ಆರ್.ಓ.ಬಿ.) ಮತ್ತು ರಸ್ತೆ ಕೆಳಸೇತುವೆ(ಆರ್.ಯು.ಬಿ.) ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಜನರ ಅನುಕೂಲಕ್ಕಾಗಿ ಎಲ್ಲ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ನಮ್ಮ ಗುರಿಯಾಗಬೇಕು ಎಂದು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಬೆಂಗಳೂರಿನ ಸುತ್ತಮುತ್ತ ರಸ್ತೆ ಮೇಲ್ಸೇತುವೆ ಮತ್ತು ರಸ್ತೆ ಕೆಳಸೇತುವೆ ಕಾಮಗಾರಿಗಳ ಪ್ರಗತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಯೋಜನೆಗಳ ಜಾರಿಯಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದರು.
ಹಿಂದಿನ 10 ವರ್ಷಗಳಲ್ಲಿ ಸುಮಾರು 75 ರಸ್ತೆಮೇಲ್ಸೇತುವೆ ಮತ್ತು ರಸ್ತೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 56 ಆರ್.ಓ.ಬಿ./ಆರ್.ಯು.ಬಿ.ಗಳ ವೆಚ್ಚವನ್ನು ರೈಲ್ವೆ ಇಲಾಖೆಯೇ ಸಂಪೂರ್ಣವಾಗಿ ಭರಿಸಿದೆ. ಇದಲ್ಲದೇ 16 ಆರ್.ಓ.ಬಿ./ಆರ್.ಯು.ಬಿ.ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ವೆಚ್ಚ ಹಂಚಿಕೆಯ ಆಧಾರದಲ್ಲಿ ಮತ್ತು 3 ಅನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿದೆ ಎಂದು ವಿ.ಸೋಮಣ್ಣ ಹೇಳಿದರು.
ಬೆಂಗಳೂರು ಸುತ್ತಮುತ್ತ 39 ಲೆವೆಲ್ ಕ್ರಾಸಿಂಗ್ ಗೇಟ್‍ಗಳನ್ನು ಆರ್.ಓ.ಬಿ./ಆರ್.ಯು.ಬಿ. ನಿರ್ಮಾಣದ ಮೂಲಕ ತೆಗೆದುಹಾಕಲು ಈಗಾಗಲೇ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು ನಗರ ಪೊಲಿಸರು ನಗರದಲ್ಲಿ ಸಂಚಾರ ದಟ್ಟಣೆಯಿಂದ ಕೂಡಿರುವ ಹಲವು ರೈಲ್ವೆ ಗೇಟ್‍ಗಳನ್ನು ಪಟ್ಟಿ ಮಾಡಿದ್ದು, ಈ ಪೈಕಿ 13 ಗೇಟ್‍ಗಳಲ್ಲಿ ಆರ್.ಓ.ಬಿ./ಆರ್.ಯು.ಬಿಗಳಿಗೆ ಈಗಾಗಲೇ ಮಂಜೂರಾತಿ ದೊರಕಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿ.ಸೋಮಣ್ಣ ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಆಡಳಿತಾಧಿಕಾರಿ(ನಿರ್ಮಾಣ) ಅಜಯ್ ಶರ್ಮಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್, ಬಿ.ಡಿ.ಎ. ಆಯುಕ್ತ ಮಣಿವಣ್ಣನ್, ಜಂಟಿ ಪೊಲೀಸ್ ಆಯುಕ್ತರು(ಸಂಚಾರ) ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ತೆಂಗು ಬೆಳೆಯಲ್ಲಿ ರೋಗ ತಡೆಗಟ್ಟುವ ಕ್ರಮಗಳ ಕುರಿತು ಸಭೆ: ಇದೇ ವೇಳೆಯಲ್ಲಿ ತೆಂಗು ಬೆಳೆಯಲ್ಲಿ ಕೀಟ ಮತ್ತು ರೋಗಗಳನ್ನು ತಡೆಗಟ್ಟುವ ಕ್ರಮಗಳನ್ನು ಚರ್ಚಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ನಡೆಯಿತು. ಈ ಸಭೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ, ತೆಂಗು ಬೆಳೆಗೆ ತಗಲುವ ಕೀಟಗಳ ನಿವಾರಣೆ ಮತ್ತು ಮಣ್ಣಿನ ಆರೋಗ್ಯ ಸುಧಾರಣೆಗೆ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳ ಕುರಿತು ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಜಾಗೃತಿ ಸಭೆಗಳನ್ನು ಆಯೋಜಿಸಲಿದೆ ಎಂದು ತಿಳಿಸಲಾಯಿತು.
ಪ್ರಮುಖವಾಗಿ ತೆಂಗು ಬೆಳೆಯುವ ಪ್ರದೇಶವಾದ ತುಮಕೂರು ಜಿಲ್ಲೆಯಲ್ಲಿ ಸಂಶೋಧನೆ, ಕೀಟ ನಿವಾರಣೆ ಮತ್ತು ಮೌಲ್ಯವರ್ಧನೆಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾಪವನ್ನೂ ಸಹ ಮಾಡಲಾಯಿತು.
ಈ ಸಭೆಯಲ್ಲಿ ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ಮಲ್ಲೇಶ್ ಬಾಬು, ಶ್ರೇಯಸ್ ಪಟೇಲ್ ಮತ್ತು ತಿಪಟೂರಿನ ಶಾಸಕ ಷಡಕ್ಷರಿ, ತೆಂಗು ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ ಸಹಿತ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







