‘ರಾಮ ಕುರಿತ ವಿಚಾರ ಸಂಕಿರಣ’ಕ್ಕೆ ಬೆಂಗಳೂರು ವಿವಿ ಕುಲಸಚಿವರ ಆದೇಶ : ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ವಿರೋಧ

ಬೆಂಗಳೂರು: ಆ.29: ಕರ್ನಾಟಕ ಸಂಸ್ಕೃ ತ ವಿವಿಯಿಂದ ಮಾನ್ಯತೆ ಪಡೆದ ‘ಕರ್ನಾಟಕ ಹಿಸ್ಟೋರಿಕಲ್ ರಿಸರ್ಚ್ ಸೊಸೈಟಿ ಸಂಸ್ಥೆ’ಯು ಸೆ.10 ಮತ್ತು ಸೆ.11ರಂದು ಧಾರವಾಡದಲ್ಲಿ ‘ಲೈಫ್ ಲೆಸ್ಸನ್ಸ್ ಫ್ರಂ ಲಾರ್ಡ್ ರಾಮ’ಸ್ ಲೈಫ್’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ಈ ಕುರಿತು ಬೆಂಗಳೂರು ವಿಶ್ವ ವಿದ್ಯಾಲಯದ ಕುಲಸಚಿವರು ಹೊರಡಿಸಿದ ಆದೇಶಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರು ವಿಶ್ವ ವಿದ್ಯಾಲಯದ ಕುಲಸಚಿವರು ಸೆ.10 ಮತ್ತು ಸೆ.11ರಂದು ನಡೆಯುವ ಈ ವಿಚಾರ ಸಂಕಿರಣಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೇಲ್ಕಂಡ ‘ವಿಷಯದ ಮೇಲೆ ಪ್ರಬಂಧ ಮಂಡಿಸಬಹುದು’ ಎಂದು ಆದೇಶ ನೀಡಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯ, ಜ್ಞಾನ ಕೇಂದ್ರವೋ? ಅಥವಾ ಧಾರ್ಮಿಕ ಕೇಂದ್ರವೋ? ಸರಕಾರದ ವ್ಯಾಪ್ತಿಯಲ್ಲಿದಿಯೋ? ಅಥವಾ ಮಠದ ವ್ಯಾಪ್ತಿಯಲ್ಲಿದೆಯೋ ಎಂದು ವಿವಿಯ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪ್ರಾಧ್ಯಾಪಕರು ಪ್ರಶ್ನಿಸಿದ್ದಾರೆ.
ಒಂದು ಇಂತಹ ಆರೆಸ್ಸೆಸ್ ಪ್ರೇರಿತ ಕಾರ್ಯಕ್ರಮಗಳಿಗೆ ಕುಮ್ಮಕ್ಕು ನೀಡುವುದೇ ಬಹುದೊಡ್ಡ ಅಪರಾಧ. ವಿದ್ಯಾರ್ಥಿಗಳನ್ನು ಧಿಕ್ಕು ತಪ್ಪಿಸಲೆಂದೆ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಪ್ರಚೋಧನೆ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವ ವಿದ್ಯಾಲಯ ಮೂಲತಃ ಡಾ.ಅಂಬೇಡ್ಕರ್ ಅವರ ಜನ ಚಳುವಳಿಯಿಂದ ನೆಲೆಗೊಂಡಿದ್ದಾಗಿದೆ, ಇಂತಹ ಜ್ಞಾನ ದೇಗುಲ ಆವರಣದಲ್ಲಿ ಮನುವಾದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದ್ದಾರೆ.





