ಭಾಗವತ್ ಸಲಹೆಗಳು ದೇಶದ ಅಭಿವೃದ್ಧಿಗೆ ಮಾರಕ : ಡಾ.ಮಹದೇವಪ್ಪ

ಬೆಂಗಳೂರು, ಆ. 30: ‘ನಮ್ಮ ದೇಶದ ಜನಸಂಖ್ಯೆಯು ವಿಶ್ವದಲ್ಲೇ ಮೊದಲನೆ ಸ್ಥಾನದಲ್ಲಿರುವ ಈ ಸಂದರ್ಭದಲ್ಲಿ ಜಾತಿ, ಧರ್ಮವನ್ನು ಮೀರಿ ಕುಟುಂಬ ಕಲ್ಯಾಣದ ಸೂತ್ರಗಳನ್ನು ಜನರಿಗೆ ಹೇಳಬೇಕಾಗಿರುವ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ‘ಮೂರು ಮಕ್ಕಳನ್ನು ಮಾಡಿಕೊಳ್ಳಿ’ ಎಂದು ಸಲಹೆ ನೀಡುತ್ತಿರುವುದು ಭಾರತದಂತಹ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ಮಾರಕವಾದ ಅಂಶವಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.
ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಜನಸಂಖ್ಯೆಯ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದಂತೆ 1951ರ ಪಂಚ ವಾರ್ಷಿಕ ಯೋಜನೆಯ ಕಾಲದಿಂದ ಹಿಡಿದು 1993ರ ಸ್ವಾಮಿನಾಥನ್ ಅವರ ರಾಷ್ಟ್ರೀಯ ಜನಸಂಖ್ಯಾ ನೀತಿಯಿಂದ ಮುಂದುವರೆದು 1997ರ ಕುಟುಂಬ ಕಲ್ಯಾಣ ಯೋಜನೆಯವರೆಗೆ ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದಂತೆ ನಮ್ಮ ಸರಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ’ ಎಂದು ಉಲ್ಲೇಖಿಸಿದ್ದಾರೆ.
‘ಜನಸಂಖ್ಯೆ ಎಂಬುದು ರಾಷ್ಟ್ರೀಯ ಸಂಪನ್ಮೂಲವಾಗಿದ್ದರೂ ಜನಸಂಖ್ಯಾ ಸ್ಪೋಟ ಎಂಬುದು ರಾಷ್ಟ್ರೀಯ ವಿಪತ್ತಿಗೆ ಕಾರಣವಾಗುತ್ತದೆ ಎಂಬ ಸಂಗತಿಯನ್ನು ತಜ್ಞರು ಹೇಳುತ್ತಾರೆ. ಕಾರಣ ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ದೇಶದ ಜನರ ತಲಾ ಆದಾಯ ಕುಗ್ಗುತ್ತದೆ, ಅಪೌಷ್ಠಿಕತೆ ನಿರ್ವಹಣೆ ಕಷ್ಟವಾಗುತ್ತದೆ ಮತ್ತು ಸಾಕ್ಷರತೆಯ ಪ್ರಮಾಣವು ಕುಂಠಿತವಾಗುವ ಸಂಭವ ಇರುತ್ತದೆ. ಇನ್ನು ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಮೂಲಸೌಕರ್ಯಗಳನ್ನು ಒದಗಿಸುವಾಗ ಜನರಿಗೆ ಅಸಮರ್ಪಕತೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.
‘ಎಲ್ಲವನ್ನೂ ಧರ್ಮದ ಕಣ್ಣಲ್ಲಿ ನೋಡುತ್ತಾ, ದೇಶವನ್ನು ಮೌಢ್ಯತೆ ಮತ್ತು ಅವೈಜ್ಞಾನಿಕತೆಯ ಕಡೆಗೆ ಕೊಂಡೊಯ್ತುತ್ತಿರುವ ಇವರು ಇದೀಗ ತಮ್ಮ ಅವಿವೇಕದ ಸಲಹೆಗಳನ್ನು ಜನರಿಗೆ ನೀಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ಜನಸಂಖ್ಯಾ ನಿಯಂತ್ರಣ ಎಂಬುದು ಎಲ್ಲರೂ ವಿವೇಕಪೂರ್ಣವಾಗಿ ನಿರ್ಧರಿಸಬೇಕಾದ ಸಂಗತಿಯಾಗಿದ್ದು ಇದು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಎನ್ನದೇ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಇರಬೇಕಾದ ರಾಷ್ಟ್ರೀಯ ತಿಳುವಳಿಕೆ ಆಗಿದೆ’ ಎಂದು ಮಹದೇವಪ್ಪ ತಿಳಿಸಿದ್ದಾರೆ.







