ಒಳಮೀಸಲಾತಿ | ಅಲೆಮಾರಿಗಳ ಹಿತ ಕಾಯುವ ಕೆಲಸ ಮಾಡುತ್ತೇವೆ : ಎಚ್.ಆಂಜನೇಯ

ಬೆಂಗಳೂರು, ಆ.31: ಇನ್ನು ಮುಂದೆ ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ಆದೇಶ ಹೊರಡಿಸುವ ಮೊದಲೇ ಮಾದಿಗ ಸಮುದಾಯದ ಸಚಿವರ ಗಮನಕ್ಕೆ ತರಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದ್ದಾರೆ.
ರವಿವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ಮಾದಿಗ ಅಧಿಕಾರಿ ಮತ್ತು ನೌಕರರ ಸಮನ್ವಯ ಸಮಿತಿ ವತಿಯಿಂದ ನಡೆದ ‘ಒಳ ಮೀಸಲಾತಿ-ಮುಂದಿನ ಹೆಜ್ಜೆಗಳು’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಇಲಾಖೆಯಿಂದ ಯಾವುದೇ ಆದೇಶ ಹೊರಡಿಸಿದರೂ ಮೊದಲೇ ತಮ್ಮ ಗಮನಕ್ಕೆ ತರಬೇಕೆಂದು ಮಾದಿಗ ಸಮುದಾಯದ ಸಚಿವರು ಸೂಚನೆ ನೀಡಬೇಕು. ಈ ಬಗ್ಗೆ ಸಚಿವ ಡಾ.ಮಹದೇವಪ್ಪ ಅವರೊಂದಿಗೂ ಸಮುದಾಯದ ಸಚಿವರು ಮಾತನಾಡಬೇಕು ಎಂದರು.
ನ್ಯಾ.ನಾಗಮೋಹನ ದಾಸ್ ಅವರು ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಿದ್ದರು. ಅವರು ಜಾತಿಯ ಆಧಾರದಲ್ಲಿ ಒಳಮೀಸಲಾತಿ ನೀಡಿರಲಿಲ್ಲ. ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸಿದ್ದರು. ಆದರೆ, ನಾಗಮೋಹನ ದಾಸ್ ಬಗ್ಗೆ ಕೆಲವರು ಹಗುರವಾಗಿ ಮಾತನಾಡಿದರು. ವರದಿಯನ್ನು ಸುಟ್ಟು ಹಾಕಿ, ಪ್ರತಿಭಟನೆಯನ್ನು ನಡೆಸಿದರು. ಅಂತಿಮವಾಗಿ ಒಳಮೀಸಲಾತಿ ಜಾರಿಯಾಗಿದೆ. ಅದಕ್ಕಾಗಿ ಸರಕಾರವನ್ನು ಅಭಿನಂದಿಸುತ್ತೇವೆ ಎಂದು ಅವರು ಹೇಳಿದರು.
ಪರೆಯ, ಮೊಗೇರ ಸಮುದಾಯಗಳನ್ನು ಮಾದಿಗರೊಂದಿಗೆ ಸೇರಿಸಲಾಗಿತ್ತು. ಅವರನ್ನು ಹೊರತುಪಡಿಸಿದರೂ ಮಾದಿಗರೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 27ಲಕ್ಷ ಜನರು ಮಾದಿಗ ಎಂದೂ, 5ಲಕ್ಷ ಜನರು ಮಾದಾರ ಎಂದು ಬರೆಸಿದ್ದಾರೆ. ಜೆಡಿಎಸ್‍ನವರು ತಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಯ ಭರವಸೆ ನೀಡಿದ್ದರು. ಬಿಜೆಪಿಯವರು ವರ್ಗೀಕರಣಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ, ಅವರು ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದರೆ ಜಾರಿಯಾಗುತ್ತಿತ್ತು. ಯಾರೂ ಮಾಡಲಾಗದ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಎಚ್.ಆಂಜನೇಯ ಶ್ಲಾಘಿಸಿದರು.
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲಿನ ಸುಳಿವು ಇತ್ತು. ಸ್ಪರ್ಧಿಸಬೇಡಿ, ನೀವು ಹಾಗೆಯೇ ಸಚಿವರಾಗುತ್ತೀರಿ ಎಂದು ಪಕ್ಷ ಹೇಳಿತ್ತು. ಆದರೆ, ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆಂದು ಹೋದೆ, ಸೋತೆ. ನನಗೆ ಅಧಿಕಾರದ ಆಸೆ ಇಲ್ಲ. ಒಳಮೀಸಲಾತಿ ನಾನು ಸತ್ತ ಮೇಲೆ ಆಗಬಹುದು ಎಂದುಕೊಂಡಿದ್ದೆ. ಸದ್ಯ ಬದುಕಿದ್ದಾಗಲೇ ಜಾರಿಗೆ ಬಂದಿದೆ ಎಂದು ಎಚ್.ಆಂಜನೇಯ ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಒಳಮೀಸಲಾತಿ ಜಾರಿಯ ಗೆಲುವು ಪ್ರತಿಯೊಬ್ಬ ಮಾದಿಗ ಬಂಧುಗಳಿಗೂ ಸೇರಬೇಕು. ಒಳಮೀಸಲಾತಿಯಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಶೇ.17ರಷ್ಟು ಮೀಸಲಾತಿಯಲ್ಲಿ ನಮಗೆ ಈವರೆಗೆ ಸಿಗುತ್ತಿದ್ದದ್ದು ಕೇವಲ ಶೇ.1.5ರಷ್ಟು ಅಷ್ಟೇ. ಮಿಕ್ಕಿದ್ದನ್ನು ಬೇರೆಯವರು ತಿನ್ನುತ್ತಿದ್ದರು. ನಾವು ಸುಮ್ಮನೇ ನೋಡುತ್ತಾ ಕೂರುತ್ತಿದ್ದೆವು. ಆದರೆ ಈಗ ಒಳಮೀಸಲಾತಿ ಜಾರಿಯಾಗಿದೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಪುಟದೊಳಗೆ ಎಷ್ಟೆಲ್ಲ ನಾಟಕೀಯ ಬೆಳವಣಿಗೆಗಳಾದವು ಎಂಬುದು ಗೊತ್ತಿದೆ ಎಂದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಮಿತಿಯ ಗೌರವಾಧ್ಯಕ್ಷ ಗೋನಾಳ ಭೀಮಪ್ಪ, ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ, ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಹೋರಾಟಗಾರರಾದ ಎಸ್.ಮಾರೆಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ ಕೌತಾಳ್, ದಾಸನೂರು ಕೂಸಣ್ಣ, ಪಾವಗಡ ಶ್ರೀರಾಮ್, ಕೇಶವಮೂರ್ತಿ, ಸಿ.ರಮೇಶ್, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಿವೃತ್ತ ಅಧಿಕಾರಿ ಭೀಮಶಂಕರ್, ಅಲೆಮಾರಿ ಒಕ್ಕೂಟದ ಕಾರ್ಯಾಧ್ಯಕ್ಷ ಚಾವಡಿ ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲೆಮಾರಿಗಳ ಹಿತ ಕಾಯುತ್ತೇವೆ: ‘ಮಾದಿಗರು ತಾಯಿ ಕರುಳಿನವರು, ಅಲೆಮಾರಿ ಸಮುದಾಯಗಳ ಜೊತೆ ನಾವು ಸದಾ ಇರುತ್ತೇವೆ. ನಾವು ಉಪವಾಸವಿದ್ದರೂ ಬೇರೆಯವರಿಗೆ ಅನ್ನ ಹಾಕಿದ ಸಮುದಾಯ ನಮ್ಮದು. ಹಂಚಿಕೊಂಡು ತಿಂದವರು ಮಾದಿಗರು. ಅಲೆಮಾರಿಗಳ ಹಿತ ಕಾಯುವ ಕೆಲಸ ಮಾಡುತ್ತೇವೆ. ಅಲೆಮಾರಿಗಳನ್ನು ಮುಂದುವರಿದವರ ಗುಂಪಿಗೆ ಹಾಕಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದೇನೆ. ಅಲೆಮಾರಿಗಳ ಜೊತೆ ಒಳಮೀಸಲಾತಿ ಹೋರಾಟಗಾರರು ಇದ್ದಾರೆ. ಅಲೆಮಾರಿಗಳಿಗೆ ಬೇರೆ ವ್ಯವಸ್ಥೆ ಮಾಡುವ ಭರವಸೆಯನ್ನು ಸಿಎಂ ನೀಡಿದ್ದಾರೆ’
-ಎಚ್.ಆಂಜನೇಯ ಮಾಜಿ ಸಚಿವ







